ಉಡುಪಿ, ನ 22: ಕೃಷ್ಣ ನಗರಿ ಉಡುಪಿಯಲ್ಲಿ ವಿ.ಹಿಂ.ಪ ವತಿಯಿಂದ ನ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ ಧರ್ಮ ಸಂಸದ್ಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಇದಕ್ಕಾಗಿ, ಉಡುಪಿ ನಗರ ಕೇಸರಿಮಯವಾಗಿದೆ.
ವೈಭವದ ಧರ್ಮ ಸಂಸದ್ ಐತಿಹಾಸಿಕ ಕಾರ್ಯಕ್ರಮಕ್ಕೆ ಕಾರ್ಯಕರ್ತರು ರಾತ್ರಿ ಹಗಲು ಎನ್ನದೇ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಸರಾಂತ ಸಾಧು ಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮಪೂಜನೀಯ ಸರಸಂಚಾಲಕ ಮಾನನೀಯ ಡಾ. ಮೋಹನ್ ಭಾಗವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮ್ ದೇವ್, ಮಾತಾ ಅಮೃತಾನಂದಮಯಿ,ರವಿಶಂಕರ ಗುರೂಜಿ, ಮಹಾಮಂಡಲೇಶ್ವರರು, ವೀರಶೈವ ಸ್ವಾಮೀಜಿಗಳು, ವಿಶ್ವ ಹಿಂದು ಪರಿಷತ್ ನ ಸೇರಿದಂತೆ 7000ಕ್ಕೂ ಅಧಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಧರ್ಮ ಸಂಸದ್ ಪ್ರಯುಕ್ತ ಮೂರು ದಿನಗಳ ಕಾಲ ಊಟದ ವ್ಯವಸ್ಥೆ ಇದ್ದು, ಮಾಜಿ ಶಾಸಕ ಕೆ. ರಘುಪತಿ ಭಟ್, ಆರ್ಎಸ್ಎಸ್ ಮುಖಂಡ ಟಿ. ಶಂಭು ಶೆಟ್ಟಿ ಮಾರ್ಗದರ್ಶನದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನಾರಾಯಣ ಬೆಳಿರಾಯ್ ಅಡುಗೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಇವರ ಜೊತೆ 50 ಕ್ಕೂ ಅಧಿಕ ಜನ ಬಾಣಸಿಗರು ಅಡುಗೆ ತಯಾರಿಗೆ ಸಜ್ಜಾಗಿದ್ದಾರೆ. ಊಟದಲ್ಲಿ ಉತ್ತರ ಭಾರತ ಶೈಲಿಯ ಚಪಾತಿ ಅಥವಾ ರೊಟ್ಟಿ ಇರಲಿದ್ದು, ಉಡುಪಿಯ ಅನ್ನ, ಸಾಂಬಾರು, ಸಾರು, ಕೋಸಂಬರಿ ಪಲ್ಯ, ಉಪ್ಪಿನಕಾಯಿ, ಪಾಯಸ ಸಹಿತ 3 ಬಗೆಯ ಸಿಹಿ ತಿಂಡಿ, ಮಜ್ಜಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಧರ್ಮ ಸಂಸದ್ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಊಟದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪ್ರಮುಖರಿಗೆ ನೀಡಲಾಗಿದೆ. ಕಾರ್ಯಕ್ರಮದ ಮೊದಲ ದಿನ ಅಂದರೆ ನ.21ರಂದು 1500 ಪ್ರಬಂಧಕರು, 22, 23ರಂದು 3500 ಮಂದಿಗೆ ಊಟ ತಯಾರಿಸುವ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಸಾಧು ಸಂತರಿಗೆ ಬಾಳೆ ಎಲೆಯಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಿದ್ದು, ಒಮ್ಮೆಗೆ 2,500 ಜನ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಧರ್ಮ ಸಂಸದ್ಗೆ ಆಗಮಿಸುವ ಎಲ್ಲರಿಗೂ ಕೊಡಿ ಬಾಳೆ ಎಲೆಯಲ್ಲಿ ಊಟ ಹಾಕಲಾಗುವುದು. ಧರ್ಮ ಸಂಸದ್ನಲ್ಲಿ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇರುವುದರಿಂದ ತಮಿಳುನಾಡಿನ ಸೇಲಂನಿಂದಲೂ ಎಲೆ ಖರೀದಿಸಿರುವುದು ಈ ಕಾರ್ಯಕ್ರಮದ ವಿಶೇಷ.
ಬೆಳಗ್ಗಿನ ಉಪಹಾರದಲ್ಲಿ ದೋಸೆ, ಇಡ್ಲಿ, ಮೂಡೆ, ಕಾರ್ಕಳ ಕೇಕ್, ಕ್ಷೀರ ಇದ್ದರೆ, ಸಂಜೆಯ ವೇಳೆ ಮದ್ದೂರು ವಡೆ, ಗೋಳಿಬಜೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೇ ಸಾಧು ಸಂತರಿಗೆ ಮಧ್ಯಾಹ್ನ ಹಾಗೂ ರಾತ್ರಿ ಹಣ್ಣು ಹಂಪಲು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುವ ವಿರಾಟ್ ಹಿಂದೂ ಸಮಾಜೋತ್ಸವಕ್ಕೂ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 1.5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಬೇರೆ ಬೇರೆ ಊರುಗಳಿಂದ ಆಗಮಿಸಲಿರುವ ಕಾರ್ಯಕರ್ತರಿಗೆ ಸೂಕ್ತ ಉಟೋಪಚಾರದ ವ್ಯವಸ್ಥೆ ಇರಲಿದೆ.
ಉದ್ಯಾವರ, ಹಿರಿಯಡ್ಕ, ಉಡುಪಿ ಪುತ್ತೂರಿನ ಎಲ್ವಿಟಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, 3 ಕಡೆಯಲ್ಲೂ 40 ಸಾವಿರ ಜನರಿಗೆ ಸಾಕಾಗುವಷ್ಟು ಊಟದ ವ್ಯವಸ್ಥೆ ಮಾಡಲಾಗಿದೆ. ದೂರದ ಉರುಗಳಿಂದ ಬರುವ ಕಾರ್ಯಕರ್ತರಿಗೆ ಉದ್ಯಾವರ, ಹಿರಿಯಡ್ಕ, ಉಡುಪಿ ಪುತ್ತೂರಿನ ಎಲ್ವಿಟಿಯಲ್ಲಿ ಊಟ ನೀಡಿ ವಿರಾಟ್ ಹಿಂದೂ ಸಮಾಜೋತ್ಸವ ನಡೆಯುವ ಎಂಜಿಎಂ ಮೈದಾನಕ್ಕೆ ಕಳುಹಿಸಲಾಗುವುದು ಎಂದು ಅಯೋಜಕರು ತಿಳಿಸಿದ್ದಾರೆ.
ದೂರದೂರುಗಳಿಂದ ಬರುವ ಸಾಧು ಸಂತರು ಸೇರಿದಂತೆ 3000ಕ್ಕೂ ಅಧಿಕ ಮಂದಿಗೆ ಉಡುಪಿಯಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದ್ದು, ಪಾಜಕ ಕ್ಷೇತ್ರ, ಆನಂದ ತೀರ್ಥ, ಹೋಟೆಲ್, ಹೊಸ ವಸತಿ ಸಮುಚ್ಚಯ, ಬ್ರಹ್ಮಗಿರಿಯ ಧರ್ಮಸ್ಥಳ ತರಬೇತಿ ಸಭಾಭವನ, ವಿದ್ಯೋದಯ ಶಾಲೆ , 100 ಕ್ಕೂ ಅಧಿಕ ಮನೆಗಳಲ್ಲಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.