ಕುಂದಾಪುರ, ಜೂ 20 (DaijiworldNews/MS): ಕುಂದಾಪುರ ತಾಲೂಕು ಪಂ ಚಾಯತ್ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಜಲಜೀವನ್ ಮಿಷನ್ ಪ್ರಗತಿ ಪರಿಶೀಲನಾ ಸಭೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಸಭೆಯಲ್ಲಿ ಅಧಿಕಾರಿಗಳಿಂದ ಕ್ಷೇತ್ರದ ಜಲಜೀವನ್ ಮಿಷನ್ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಐಆರ್ಬಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್, ಟ್ಯಾಂಕ್ ನಿರ್ಮಾಣಕ್ಕೆ ಮೀಸಲು ಅರಣ್ಯ ಇಲಾಖೆಯಿಂದ ತಾಂತ್ರಿಕ ಅಡಚಣೆಗಳು, ಅನುಮತಿ ಸಮಸ್ಯೆ ಆಗುತ್ತಿದ್ದು ಇದನ್ನು ಪರಿಹರಿಸಿಕೊಳ್ಳಬೇಕು. ಡೀಮ್ಸ್ ಪಾರೆಸ್ಟ್ ಸಮಸ್ಯೆಗಳ ಗೊಂದಲಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡುವ ಮೂಲಕ ಸಮಸ್ಯೆ ಪರಿಹಾರ ಒದಗಿಸಬೇಕು. ಸುಭದ್ರ ಕನ್ಸಕ್ಯನ್ಸ್ ಹಾಗೂ ಜಲಜೀವನ್ ಮಿಷನ್ ಯೋಜನೆಯ ಇಂಜಿನೀಯರ್ ಗಳು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿರುವ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.
ಶಾಸಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಇಂಜೀನಿಯರ್ ರಾಜ್ ಕುಮಾರ್, ಟ್ಯಾಂಕರ್ ಸಮಸ್ಯೆ, ಪೈಪ್ ಲೈನ್ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಶೀಘ್ರವಾಗಿ ಪರಿಹರಿಸುತ್ತೇವೆ. ಕೆಲವು ಕಡೆ ಜೆಜೆಎಂ ನಲ್ಲಿ ಪೈಪ್ ಲೈನ್ ಆಗಿದ್ದರೂ ಕೂಡಾ ನೀರಿನ ಮೂಲದ ಸಮಸ್ಯೆಗಳು, ಟ್ಯಾಂಕರ್ ಪರಿಪೂರ್ಣಗೊಳ್ಳದಿರುವುದರ ಬಗ್ಗೆ ಗಮನಕ್ಕಿದೆ. ಕೆಲವು ತಾಂತ್ರಿಕ ಅಡಚಣೆಗಳಿಂದ ಕೆಲಸ ನಿಧಾನಗತಿಯಲ್ಲಿ ಪ್ರಗತಿಯಲ್ಲಿದೆ. ಕೆಲವೆಡೆ ಅರಣ್ಯ ಇಲಾಖೆಗಳಿಂದ ಅನುಮತಿ ದೊರಕಬೇಕಿದೆ. ಶೀಘ್ರವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡು ಯೋಜನಾ ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಅವೈಜ್ಞಾನಿಕ ಡಿಪಿಆರ್ ಹಾಗೂ ಅಪೂರ್ಣ ಕೆಲಸಗಳ ಬಗ್ಗೆ ಹೆಮ್ಮಾಡಿ, ಹಳ್ಳಿಹೊಳೆ, ಆಲೂರು, ಬೊಳ್ಳಂಬಳ್ಳಿ, ಅಂಪಾರು, ವಂಡ್ಸೆ, ಇಡೂರು, ಹೊಸಾಡು, ತ್ರಾಸಿ, ತಲ್ಲೂರು, ಉಪ್ಪುಂದ, ಇಡೂರು ಕುಂಜ್ಜಾಡಿ, ಯಳಜಿತ್, ಗೋಳಿಹೊಳೆ, ಜಡ್ಕಲ್, ಶಿರೂರು ಗ್ರಾಮ ಪಂಚಾಯತ್ನ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಅಧಿಕಾರಿಗಳು ಸ೦ಬ೦ಧಪಟ್ಟ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆದಾರರು ಕೂಡಲೇ ಸರಿಪಡಿಸಿ ಕೊಡುವಂತೆ ಆಗ್ರಹಿಸಿದರು.
ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಾಗೂ ಸರ್ವಿಸ್ ರಸ್ತೆ, ವ್ಯವಸ್ಥಿತ ಚರಂಡಿ ವ್ಯವಸ್ಥೆ ಪಾಸಿಂಗ್, ಬಸ್ಸು ಪ್ರಯಾಣಿಕರ ತಂಗುದಾಣಗಳ ಸಮಸ್ಯೆಗಳ ಬಗ್ಗೆಯೂ ಶಾಸಕರ ಗಮನಕ್ಕೆ ತಂದರು. ಐಆರ್ಬಿ ಅಧಿಕಾರಿಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ತರಾಟೆಗೆ ತೆಗೆದುಕೊಂಡರು. ಹೆದ್ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಮಸ್ಯೆಗಳನ್ನು ಇನ್ನು ಹತ್ತು ದಿನಗಳಲ್ಲಿ ಸರಿಪಡಿಸಿಕೊಡುವಂತೆ ಗಡುವು ನೀಡಿ ಸೂಚಿಸಿದರು. ಸಭೆಯಲ್ಲಿ ಬೈಂದೂರು ಇಓ ಭಾರತಿ ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಒಟ್ಟು ಸುಭದ್ರ ಕನ್ಸಕ್ಷನ್, ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 220 ಟ್ಯಾಂಕರ್ಗಳು ನಿರ್ಮಾಣವಾಗಬೇಕಿದೆ. ಈಗಾಗಲೇ ಈ ಪೈಕಿ 60 ಟ್ಯಾಂಕರ್ಗಳು ಪೂರ್ಣಗೊಂಡಿದ್ದು, 60 ಟ್ಯಾಂಕರ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ದೊರಕಿಲ್ಲ. 100 ಟ್ಯಾಂಕರ್ಗಳ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ.