ಮಂಗಳೂರು, ಮೇ 14 (Daijiworld News/MSP): ಸಲಿಂಗ ಕಾಮದ ಆರೋಪದಲ್ಲಿ ನಗರದ ಅಳಕೆ ಬಳಿ ದೈವಪಾತ್ರಿಯೊಬ್ಬರ ಮೇಲೆ ಇತ್ತೀಚೆಗೆ ಗುಂಪೊಂದು ಹಲ್ಲೆ ನಡೆಸಿ, ತಲೆಗೂದಲು ಕತ್ತರಿಸಿರುವ ಘಟನೆಯ ವಿಡಿಯೊ ವೈರಲ್ ಆಗಿತ್ತು. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಲೋಕೇಶ್ ಎಂಬ ದೈವಪಾತ್ರಿಯನ್ನು ಸುತ್ತುವರಿದ ತಂಡ ಅವರ ಮೇಲೆ ಹಲ್ಲೆ ನಡೆಸಿತ್ತು. ಅವರ ತಾಯಿ ಬಿಡಿಸಲು ಯತ್ನಿಸಿದರೂ ಅವಕಾಶ ನೀಡಿರಲಿಲ್ಲ. ದೈವಪಾತ್ರಿ ಉದ್ದನೆಯ ತಲೆಗೂದಲು ಹೊಂದಿದ್ದರು. ಕತ್ತರಿ, ರೇಜರ್ ಬಳಸಿ ಅವರ ತಲೆಗೂದಲನ್ನು ಕತ್ತರಿಸಿದ್ದ ತಂಡ, ಬಲವಂತವಾಗಿ ಕೈಯಲ್ಲಿನ ಕಡಗಗಳನ್ನು ತೆಗೆಸಿ ದೇವರ ಹುಂಡಿಗೆ ಹಾಕಿಸಿತ್ತು.
‘ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ವೈರಲ್ ಆಗಿರುವ ವಿಡಿಯೊ ಆಧರಿಸಿ ಬರ್ಕೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ನಡೆಸಿದವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.