ನವದೆಹಲಿ, ಮೇ 14 (Daijiworld News/MSP): ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ’ ಮೀನುಗಾರಿಕೆ ದೋಣಿಯಿಂದ ಕಾಣೆಯಾಗಿರುವ ಏಳು ಜನ ಮೀನುಗಾರರ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟೀಸ್ ನೀಡಿದ್ದು ವಾರದ ಗಡುವು ನೀಡಿ ಉತ್ತರಿಸುವಂತೆ ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮ ವರದಿಯನ್ನು ಆಧಾರವಾಗಿಟ್ಟುಕೊಂಡು ಆಯೋಗವು ಸ್ವಯಂ ವಿಚಾರಣೆಗೆ ಮುಂದಾಗಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರ ನೀಡುವಂತೆ ಸೂಚಿಸಿದೆ.
ಕಳೆದ ಡಿಸೆಂಬರ್ನಲ್ಲಿ ಕಣ್ಮರೆಯಾಗಿದ್ದ ದೋಣಿಯ ಅವಶೇಷಗಳು ಮಹಾರಾಷ್ಟ್ರದ ಸಿಂಧುದುರ್ಗದ ಬಳಿ ಸಮುದ್ರದಾಳದಲ್ಲಿ ಪತ್ತೆಯಾಗಿರುವ ಕುರಿತು ನೌಕಾಪಡೆ ಖಚಿತಪಡಿಸಿರುವ ಕುರಿತ ಪತ್ರಿಕಾ ವರದಿಗಳನ್ನು ಆಧರಿಸಿ ಸ್ವಯಂಪ್ರೇರಣೆಯಿಂದ ಈ ನೋಟಿಸ್ ಜಾರಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಕ್ಷಣಾ ಇಲಾಖೆಯ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿರುವ ಆಯೋಗ, ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಮೀನುಗಾರರು ಕಾಣೆಯಾಗಿದ್ದರಿಂದ ತೀವ್ರ ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲಾಗಿದೆಯೇ ಎಂಬ ಕುರಿತು ವಿವರಿಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಸೂಚಿಸಿದೆ.