ಉಡುಪಿ, ಜೂ.22(DaijiworldNews/AA): ಸರ್ವೀಸ್ ರಸ್ತೆಗೆ ಪ್ರವೇಶಿಸದೆ ಏಕಾಏಕಿ ಯಾವುದೇ ಸೂಚನೆ ನೀಡದೆ ಖಾಸಗಿ ಬಸ್ಸೊಂದು ಹೆದ್ದಾರಿಯಲ್ಲಿ ನಿಂತ ಪರಿಣಾಮ ಬಸ್ಸಿನ ಹಿಂಬದಿಗೆ ಕಾರೊಂದು ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಗಂಭೀರ ಗಾಯಗಳಾದ ಘಟನೆ ಉಡುಪಿಯ ಪಡುಬಿದ್ರಿಯಲ್ಲಿ ಜೂನ್ 21ರಂದು ನಡೆದಿದೆ.

ಅಪಘಾತದಲ್ಲಿ ಮಂಗಳೂರು ಮಂಗಳಾದೇವಿ ನಿವಾಸಿ ಪುಷ್ಪಲತಾ ಆಚಾರ್ಯ (56) ಎಂಬುವವರಿಗೆ ತೀವ್ರ ಗಾಯಗಳಾಗಿವೆ.
ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ಸರ್ವೀಸ್ ರಸ್ತೆಗಿಳಿಯದೇ ರಾಷ್ಟ್ರೀಯ ಹೆದ್ದಾರಿಯಲ್ಲೇ ಯಾವುದೇ ಸೂಚನೆ ನೀಡದೆ ಏಕಾಏಕಿ ನಿಂತಿದೆ. ಪರಿಣಾಮ ಇದೇ ವೇಳೆಗೆ ಮಂಗಳೂರಿನಿಂದ ಉಡುಪಿಯತ್ತ ಸಾಗುತ್ತಿದ್ದ ಕಾರೊಂದು ಬಸ್ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಕಾರಿನಲ್ಲಿ ಗಾಯಾಳು ಪುಷ್ಪಲತಾ, ಅವರ ಪುತ್ರಿ, ಸಂಬಂಧಿ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಚಾಲಕನ ಬದಿಯಲ್ಲಿ ಕುಳಿತ್ತಿದ್ದ ಪುಷ್ಪಲತಾ ಅವರ ಕಾಲುಗಳಿಗೆ, ಕೈಗೆ ಹಾಗೂ ಮೂಗಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನು ಗಾಯಾಳು ಪುಷ್ಪಲತಾ ಅವರಿಗೆ ಪಡುಬಿದ್ರಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ಸರ್ವಿಸ್ ರಸ್ತೆಗಿಳಿಯದೇ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಂಚರಿಸುವ ಚಾಳಿ ಮಂಗಳೂರು ಮತ್ತು ಉಡುಪಿ ನಡುವಿನ ಕೆಲ ಬಸ್ಗಳಿವೆ. ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.