ಬಂಟ್ವಾಳ, ನ 22: ಬೆಳ್ತಂಗಡಿ - ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿ ವೀರ - ವಿಕ್ರಮ ಜೋಡುಕರೆ ಬಯಲು ಕಂಬಳವು ನ. 25 ರಂದು ಶನಿವಾರ ವೈಭವಪೂರ್ಣವಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಕ್ಷಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ದ ಪೂಂಜ ಶ್ರೀ ಪಂಚದುರ್ಗ ಪರಮೇಶ್ವರೀ ದೇವಸ್ಥಾನಕ್ಕೆ ವಿಶೇಷವಾಗಿ ಧಾರ್ಮಿಕ ನಂಟು ಹೊಂದಿರುವ ಹೊಕ್ಕಾಡಿಗೋಳಿ ವೀರ - ವಿಕ್ರಮ ಜೋಡುಕರೆ ಬಯಲು ಕಂಬಳ ಇದಾಗಿದ್ದು, ಕಂಬಳವನ್ನು ಪೂಂಜ ಕ್ಷೇತ್ರದ ಅಸ್ರಣ್ಣರಾದ ಕೆ. ಕೃಷ್ಣಪ್ರಸಾದ್ ಅವರು ಉದ್ಘಾಟಿಸಲಿದ್ದಾರೆ. ಪ್ರದಾನ ಆರ್ಚಕ ಅನಂತ ಆಚಾರ್ಯ, ಮಾಜಿ ತಾ.ಪಂ ಸದಸ್ಯ ರತ್ನಕುಮಾರ್ ಚೌಟ, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಮ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು, ಉದ್ಯಮಿಗಳು, ಸಾಮಾಜಿಕ ದುರೀಣರು, ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದ ಅವರು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಸುಮಾರು 100 ರಿಂದ 110 ಜೋಡಿ ಓಟದ ಕೋಣಗಳು ಭಾಗವಹಿಸಲಿದೆ. ದೇವರ ಕಂಬಳ ಎಂದೇ ಪ್ರಸಿದ್ದಿಯಲ್ಲಿರುವ ಈ ಕಂಬಳ ಕೂಟವು ಅನಿವಾರ್ಯಗಳಿಂದ ಕಾರಣಗಳಿಂದ ಸ್ಥಗಿತಗೊಂಡಿತ್ತು. ಬಳಿಕ 2010-12 ಅವಧಿಯಲ್ಲಿ ಜಿ.ಪಂ ಅಧ್ಯಕ್ಷರಾಗಿದ್ದ ಸಂತೋಷ ಕುಮಾರ್ ಭಂಡಾರಿಯವರ ನೇತ್ರತ್ವದಲ್ಲಿ ಕಂಬಳ ಕೂಟ ಆರಂಭಗೊಂಡಿತ್ತು. ಅವರ ನಿಧನದ ನಂತರ 2012-13 ರ ಅವಧಿಯಲ್ಲಿ ನ್ಯಾಯವಾದಿ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಂಬಳ 2014-16ರ ವರೆಗೆ ನ್ಯಾಯಾಲಯದ ತೀರ್ಪು ಇತರೆ ಕಾರಣದಿಂದ ಸ್ಥಗಿತಗೊಂಡಿದ್ದು, ಇದೀಗ ಪ್ರಸ್ತುತ ವರ್ಷದಲ್ಲಿ ಆರಂಭಗೊಂಡಿದೆ ಎಂದರು.
ಕಂಬಳವು ಜಿಲ್ಲಾ ಕಂಬಳ ಸಮಿತಿ ವಿಧಿಸಿದ ಷರತ್ತಿನಂತೆ ಈ ಕಂಬಳ ಕೂಟ ನಡೆಯಲಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರ ಸುರೇಶ್ ಶೆಟ್ಟಿ, ಪದಾಧಿಕಾರಿಗಳಾದ ಹರೀಶ್ ಹಿಂಗಾಣಿ, ಹರಿಪ್ರಸಾದ್ ಕುರುಡಾಡಿ, ಸಂದೇಶ್ ಶೆಟ್ಟಿ ಪೊಡುಂಬು, ರಾಘವೇಂದ್ರ ಭಟ್, ಪುಷ್ಪರಾಜ್ ಜೈನ್, ಪ್ರಭಾಕರ ಹುಲಿಮೇರು, ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ಮೋಹನ್ ಕೆ.ಶ್ರೀಯಾನ್ ಮೊದಲಾದವರಿದ್ದರು.