ಮಂಗಳೂರು,ಮೇ 14 (Daijiworld News/MSP): ವರುಣನ ಕೃಪೆಯಿಲ್ಲದೆ ಈ ಬಾರಿ ಕರಾವಳಿಯ ಜನತೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಒಂದೆಡೆ ಬಿಸಿಲಿನ ಝಳ ಇನ್ನೊಂದೆಡೆ ತುಂಬೆ ಡ್ಯಾಂ ನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು ನಗರವಾಸಿಗಳು ನೀರಿಲ್ಲದೆ ಕಂಗಲಾಗಿದ್ದಾರೆ.
ಇನ್ನೊಂದೆಡೆ ವರುಣನ ಕೃಪೆಗಾಗಿ ಪ್ರಾರ್ಥಿಸಿ ಮೇ 14 ರ ಬೆಳಗ್ಗೆ 9.30 ಕ್ಕೆ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭೀಷೇಕ ನಡೆಯಿತು.
ಕಲ್ಕೂರ ಪ್ರತಿಷ್ಟಾನ ಮತ್ತು ಕದ್ರಿ ಪರಿಸರದ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕದ್ರಿ ಶ್ರೀ ಮಂಜುನಾಥಲ್ಲಿ ಮಳೆಗಾಗಿ ಪ್ರಾರ್ಥಿಸಿ ಸೀಯಾಳಾಭೀಷೇಕ ನಡೆಸಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ಬೇಸಿಗೆ ಮಳೆಯ ಕೊರತೆ ಹಾಗೂ ಬಿಸಿಲಿನ ಝಳದಿಂದ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪರಿಷ್ಕರಿತ ರೇಷನಿಂಗ್ ನಿಯಮವನ್ನು ಜಾರಿಗೆ ತರಲಾಗಿದೆ. ಸೋಮವಾರದಂದು ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ 3.82 ಮೀ ಇದೆ ಕಳೆದ ವರ್ಷ ಇದೇ ದಿನದಂದು 5.93 ಮೀ ನೀರು ಸಂಗ್ರಹವಿತ್ತು.