ಮಂಗಳೂರು, ಮೇ14(Daijiworld News/SS): ವಿಮಾನ ನಿಲ್ದಾಣಗಳ ಸೇವಾ ಗುಣಮಟ್ಟದಲ್ಲಿ 4.85 ರೇಟಿಂಗ್ ಹೊಂದಿರುವ ಮಂಗಳೂರು ವಿಮಾನ ನಿಲ್ದಾಣ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
2019ರ ಸಾಲಿನ 3 ತಿಂಗಳ ಅವಧಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವಾ ಗುಣಮಟ್ಟದ ರ್ಯಾಂಕಿಂಗ್ ಕುಸಿದರೂ ದೇಶದ ಖಾಸಗಿ, ಜಂಟಿ ಸಹಭಾಗಿತ್ವದ ವಿಮಾನ ನಿಲ್ದಾಣಗಳ ಸಮೀಕ್ಷೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗ್ರಸ್ಥಾನ ಕಾಯ್ದುಕೊಂಡಿದೆ.
2018ರ ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಸೇವಾ ಗುಣಮಟ್ಟದ ರೇಟಿಂಗ್ 4.92ರಷ್ಟಿತ್ತು. ಆದರೆ 2019ರ 3 ತಿಂಗಳ ಅವಧಿಯ (ಎಎಸ್ಕ್ಯೂ) ಸೇವಾ ಗುಣಮಟ್ಟದ ರೇಟಿಂಗ್ 4.85ಕ್ಕೆ ಕುಸಿದಿದೆ. ದೇಶದ ಒಟ್ಟು ವಿಮಾನ ನಿಲ್ದಾಣಗಳನ್ನು ಗಮನಿಸಿದಾಗ 2018ರಲ್ಲಿ ಇದ್ದ ಸೇವಾ ಗುಣಮಟ್ಟದ ರ್ಯಾಂಕಿಂಗ್ 27ರಿಂದ ಪ್ರಸ್ತುತ ವರ್ಷದ 3 ತಿಂಗಳ ಅವಧಿಯಲ್ಲಿ 38ಕ್ಕೆ ಕುಸಿದಿದೆ. ಆದರೆ ಸೇವಾ ಗುಣಮಟ್ಟಕ್ಕೆ ಸಂಬಂಧಿಸಿ ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಸರಾಸರಿ ರೇಟಿಂಗ್ 4.6 ಇದೆ.
ಹಾಗಾಗಿ 4.85 ರೇಟಿಂಗ್ ಹೊಂದಿರುವ ಮಂಗಳೂರು ವಿಮಾನ ನಿಲ್ದಾಣ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಉಳಿದಂತೆ ಅಹಮದಾಬಾದ್ ವಿಮಾನ ನಿಲ್ದಾಣದ ರೇಟಿಂಗ್ 4.81 ಮತ್ತು ತಿರುವನಂತಪುರ ವಿಮಾನ ನಿಲ್ದಾಣದ ರೇಟಿಂಗ್ 4.80 ಆಗಿದ್ದು, ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
ತಿರುವನಂತಪುರಂ ವಿಮಾನ ನಿಲ್ದಾಣದ ರ್ಯಾಂಕಿಂಗ್ ಕಳೆದ ಸಾಲಿನ ಕೊನೆಯ ಅವಧಿಯಲ್ಲಿ 36 ಆಗಿದ್ದು, ಈ ವರ್ಷದ ಆರಂಭದಲ್ಲಿ ಇದು 46ಕ್ಕೆ ಕುಸಿದಿದೆ. ಆದರೆ ಎರಡನೇ ಸ್ಥಾನದಲ್ಲಿರುವ ಅಹಮ್ಮದಾಬಾದ್ನ ರ್ಯಾಂಕಿಂಗ್ 61ರಿಂದ 43ಕ್ಕೆ ಏರಿಕೆಯಾಗಿದೆ.