ಕಾರ್ಕಳ, ಮೇ 14 (Daijiworld News/SM): ಅದೆಷ್ಟೋ ರಾತ್ರಿ ಹೊತ್ತಾಗಿರಲಿ, ದುರ್ಗಮ ಹಾದಿ ಇರಲಿ ವಿಷ ಸರ್ಪಗಳು ಮನೆ ಸೇರಿವೆ ಎಂಬ ಮಾಹಿತಿ ಬಂದರೆ ಯಾವುದೇ ಫಲಪೇಕ್ಷೆ ಇಲ್ಲದೆ ದೌಡಾಯಿಸುತ್ತಾರೆ. ಸಾಮಾಜಿಕ ಕಾಳಜಿಯಿಂದ ಉರಗಗಳನ್ನು ಹಿಡಿದು ಅವುಗಳನ್ನು ರಕ್ಷಿಸಿ ರಕ್ಷಿತಾರಣ್ಯಕ್ಕೆ ಸಾಗಿಸುತ್ತಾರೆ. ಹೀಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ವಿಷಪೂರಿತ ಹಾವುಗಳನ್ನು ಹಿಡಿದು ಕಾಡಿಗೆ ರವಾನಿಸುತ್ತಿರುವ ಕಾರ್ಕಳ ತಾಲೂಕಿನ ತೆಳ್ಳಾರು 12ನೇ ಅಡ್ಡರಸ್ತೆ ನಿವಾಸಿ ಉರಗಪ್ರೇಮಿ ಅನಿಲ್ ಪ್ರಭು ಅವರ ಸಮಾಜ ಸೇವೆಗೆ ಹಾವಿನ ಕ್ರೋದ ತಟ್ಟಿದ್ದು, ವಿಷ ಸರ್ಪ ಕಡಿತಕ್ಕೊಳಗಾಗಿ ಅವರು ಆಸ್ಪತ್ರೆ ಸೇರಿದ್ದಾರೆ. ಸಮಾಜ ಸೇವೆಯನ್ನೇ ಉಸಿರಾಗಿಸಿದ್ದ ಅನಿಲ್ ಪ್ರಭು ಇದೀಗ ಇತರರ ನೆರವಿಗೆ ಎದುರು ನೋಡುವ ಪರಿಸ್ಥಿತಿ ಬಂದೊದಗಿದೆ.
ಎಂತಹ ಭಯಾನಕ ಹಾವೇ ಇರಲಿ ಅವುಗಳನ್ನು ಕ್ಷಣಾರ್ಧದಲ್ಲೇ ಪಳಗಿಸುವ ಚಾಕಚಕ್ಯತೆ ಅನಿಲ್ ಹೊಂದಿದ್ದರು. ಅದೇ ಕಾರಣದಿಂದ ಅವರು ಸುಮಾರು 1500ಕ್ಕೂ ಅಧಿಕ ನಾಗರಹಾವು, 17ಕ್ಕೂ ಮಿಕ್ಕಿ ಕಾಳಿಂಗ ಸರ್ಪ ಹಾಗೂ ವಿವಿಧ ಪ್ರಭೇಧದ ಹಾವುಗಳನ್ನು ಹಿಡಿದು ಕಾಡಿಗಟ್ಟಿದ್ದಾರೆ. ಹಾವುಗಳನ್ನು ಹಿಡಿಯುವುದು ಸಮಾಜಸೇವೆ ಎನ್ನುವುದು ಅನಿಲ್ ಪ್ರಭು ಅವರ ಅಭಿಪ್ರಾಯವಾಗಿದೆ.
ಇನ್ನು ಕಾಳಿಂಗ ಸರ್ಪಗಳು, ನಾಗಗಳು ಮನೆಯಲ್ಲಿ ಅವಿತುಕೊಂಡ ಸಂದರ್ಭದಲ್ಲಿ ಸ್ಥಳೀಯರು ನೀಡುತ್ತಿದ್ದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯವರು ಅನಿಲ್ ಪ್ರಭು ಅವರಿಗೆ ಕರೆ ಮಾಡಿ ಹಾವುಗಳನ್ನು ಸೆರೆ ಹಿಡಿಯಲು ನೆರವಾಗುವಂತೆ ಕೋರುತ್ತಿದ್ದರು. ಹಾವುಗಳನ್ನು ಹಿಡಿದ ಸಂದರ್ಭದಲ್ಲಿ ಮನೆಮಂದಿಯಿಂದ ಯಾವುದೇ ರೀತಿಯಲ್ಲಿ ಹಣ ಪಡೆಯುವ ರೂಢಿಯನ್ನು ಅವರು ಇಟ್ಟುಕೊಂಡಿಲ್ಲ. ಜಾತಿ, ಧರ್ಮ, ಭಾಷೆ, ವರ್ಗ ಇವೆಲ್ಲವುಗಳನ್ನು ಮೀರಿ ಎಲ್ಲರಿಗೂ ಅನಿಲ್ ಪ್ರಭು ನೆರವಾಗುತ್ತಿದ್ದರು.
ಎಪ್ರಿಲ್ ೧೪ರಂದು ಸಾರ್ವಜನಿಕರ ಕರೆಯ ಮೇರೆಗೆ ತೆಳ್ಳಾರು 12ನೇ ಅಡ್ಡರಸ್ತೆ ನಿವಾಸಿ ಅನಿಲ್ ಪ್ರಭು ನಗರದ ಕುಂಟಲ್ಪಾಡಿ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಬಲೆಯೊಂದರಲ್ಲಿ ಸಿಕ್ಕಿಕೊಂಡ ನಾಗರ ಹಾವು ಪ್ರಾಣ ರಕ್ಷಣೆಗಾಗಿ ಹೊರಳಾಡುತ್ತಿತ್ತು. ಅದನ್ನು ಬಲೆಯಿಂದ ಹೊರ ತೆಗೆಯಲು ಸಾಕಷ್ಟು ಪ್ರಯಾಸ ಪಟ್ಟು ಯಶಸ್ಸು ಆಗಿದ್ದ ಅನಿಲ್ ಪ್ರಭು, ಅದರ ಬಾಯಿಯೊಳಗೆ ಹೋಗಿದ್ದ ಬಲೆಯ ನಾರು ಹೊರ ತೆಗೆಯುತ್ತಿದ್ದಂತೆ ಏಕಾಏಕಿ ಎಡಕೈಯ ಹೆಬ್ಬೆರಳಿಗೆ ಹಾವು ಕಡಿದಿತ್ತು. ಇಷ್ಟಾದರೂ ನೋವಿನ ಮಧ್ಯೆ ಅದನ್ನು ಪೆಟ್ಟಿಗೆಯೊಳಗೆ ಹಾಕಿ, ತನ್ನ ಕೈಗೆ ಹಗ್ಗ ಬಿಗಿದು ತಾನು ಬಂದಿದ್ದ ಜೀಪನ್ನು ಚಲಾಯಿಸಿಕೊಂಡು ನೇರವಾಗಿ ಕಾರ್ಕಳ ನರ್ಸಿಂಗ್ ಹೋಂಗೆ ಬಂದಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ತಲೆ ಸುತ್ತುವಿಕೆ, ಉಸಿರಾಡುವಿಕೆಯ ತೊಂದರೆ ಅವರಲ್ಲಿ ಕಂಡು ಬಂತು.
ಈ ಎಲ್ಲಾ ಬೆಳವಣಿಗೆಯ ನಂತರ ಚಿಕಿತ್ಸೆಗಾಗಿ ಬರೋಬ್ಬರಿ ಮೂರು ಲಕ್ಷ ಖರ್ಚಾಗಿದೆ ಎಂದು ಹೇಳಿಕೊಳ್ಳುವ ಅನಿಲ್ ಪ್ರಭು, ತನ್ನ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಕಂಡು ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ವಿಷ ಪೂರಿತ ನಾಗನ ಕಡಿತದಿಂದ ಒಂದೆಡೆ ಹೃದಯ ಹಾಗೂ ಕಿಡ್ನಿ ಸಮಸ್ಸೆ ಕಾಡಲಾರಂಭಿಸಿದರೆ, ಮತ್ತೊಂದೆಡೆ ಹಾವಿನ ಕಡಿತದಿಂದ ಎಡ ಕೈ ಕೊಳೆಯಲಾರಂಭಿಸಿದೆ. ಅವರ ಕೈಭಾಗ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ತೊಡೆಯ ಮಾಂಸವನ್ನು ಅಂಗೈಗೆ ಜೋಡಣೆ ಮಾಡಲಾಗಿದೆ. ಇದರಿಂದ ನಡೆದಾಡುವ ಪರಿಸ್ಥಿತಿ ಅವರಲ್ಲಿಲ್ಲ. ಹೆಚ್ಚಿನ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದ್ದು, ಇನ್ನಷ್ಟು ಹಣಕಾಸಿನ ಅಗತ್ಯತೆ ಅವರಿಗಿದೆ.
ಬಲಗೈ ಬೆರಳು ಕಳೆದುಕೊಂಡಿದ್ದರು:
ಕಳೆದ ಎರಡು ವರ್ಷಗಳ ಹಿಂದೆ ಇಂತಹದೇ ಒಂದು ಘಟನೆಯಲ್ಲಿ ಅನಿಲ್ ಪ್ರಭು ತನ್ನ ಬಲಗೈ ಬೆರಳೊಂದನ್ನು ಕಳೆದುಕೊಂಡಿದ್ದರು. ಗಾಯಗೊಂಡಿದ್ದ ನಾಗರ ಹಾವಿನ ಚಿಕಿತ್ಸೆ ಮಾಡುತ್ತಿದ್ದ ಸಂದರ್ಭದಲ್ಲಿ ಅದು ಅವರ ಬಲಕೈಗೆ ಕಡಿದಿತ್ತು. ಆ ಸಂದರ್ಭದಲ್ಲಿ ವೈದ್ಯರು ಅನಿಲ್ಪ್ರಭೂ ಅವರ ಬಲಗೈಯ ಬೆರಳನ್ನು ತುಂಡರಿಸಿ ಅವರ ಅವರ ಜೀವ ಉಳಿಸಿದ್ದರು.
ಚಿಕಿತ್ಸೆ ಬೇಕಿದೆ ನೆರವು:
ಅನಿಲ್ ಪ್ರಭು ಅವರ ಆರೋಗ್ಯ ಸ್ಥಿತಿಯಲ್ಲೂ ಏರುಪೇರು ಕಾಣಿಸುತ್ತಿದೆ. ಎಡಗೈ ಸಂಪೂರ್ಣ ಕೊಳೆಯುತ್ತಿದ್ದು ಅಗತ್ಯ ಶಸ್ತ್ರಚಿಕಿತ್ಸೆ ನಡೆಸಲು ನೆರವು ಬೇಕಾಗಿದೆ. ಆರ್ಥಿಕ ಹಾಗೂ ಮಾನಸಿಕವಾಗಿ ಜರ್ಜರಿತರಾಗಿರುವ ಅನಿಲ್ ಪ್ರಭು ಅವರಿಗೆ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ನೀಡುವವರು ಈ ಕೆಳಗಿನ ಬ್ಯಾಂಕ್ಗೆ ನೆರವನ್ನು ಕಳುಹಿಸಬಹುದು.
ಬ್ಯಾಂಕ್ ಖಾತೆಯ ವಿವರ:
Account Name: Anil Prabhu A
Bank account No: 4042500101856001
Name of the bank: Karnataka Bank
Branch: Karkala
IFSC Code: KARB0000404
Mobile: 0091-9964069586