ಮಂಗಳೂರು, ಮೇ14(Daijiworld News/SS): ನೀರಿನ ಸಮಸ್ಯೆಯಿಂದಾಗಿ ನಗರದ ಹೊರವಲಯದ ಪಣಂಬೂರಿನಲ್ಲಿರುವ ರಸಗೊಬ್ಬರ ಕಾರ್ಖಾನೆ - ಎಂಸಿಎಫ್ ತನ್ನ ಕಾರ್ಯಚರಣೆಯನ್ನು ಮಂಗಳವಾರದಿಂದ ಸ್ಥಗಿತಗೊಳಿಸಿದೆ.
ಮಂಗಳೂರು ಕೆಮಿಕಲ್ ಫರ್ಟಿಲೈಸರ್(ಎಂಸಿಎಫ್) ಕಂಪನಿ ನೀರಿಲ್ಲದ ಕಾರಣದಿಂದ ಸ್ಥಗಿತಗೊಂಡಿದ್ದು, ನೀರಿನ ಪೂರೈಕೆ ಸಮರ್ಪವಾಗುವ ತನಕ ಇದೇ ಪರಿಸ್ಥಿತಿ ಮುಂದುವರಿಯಲಿದೆ. ರಸಗೊಬ್ಬರ ಕಾರ್ಖಾನೆಗೆ ಇನ್ನೂ ಮಳೆಗಾಲ ಆರಂಭಗೊಂಡ ಬಳಿಕವಷ್ಟೇ ನೀರಿನ ಪೂರೈಕೆ ಸಾಧ್ಯವಾಗಲಿದೆ.
ಮಂಗಳೂರಿಗೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪರಿಣಾಮ, ಈ ಬಾರೀ ದೊಡ್ಡ ಪ್ರಮಾಣದಲ್ಲಿ ನೀರಿನ ಕೊರತೆ ಎದುರಾಗಿದೆ.
ಈ ಬಗ್ಗೆ ಎಂಸಿಎಫ್ ನಿರ್ದೇಶಕ ಪ್ರಭಾಕರ ರಾವ್ ಪ್ರತಿಕ್ರಿಯಿಸಿದ್ದು, ಪ್ರತಿದಿನ ಎಂಸಿಎಫ್ ಕಾರ್ಖಾನೆ ಕೆಲಸ ಮಾಡಲು 1.6 ಮಿಲಿಯನ್ ಗ್ಯಾಲನ್ ನೀರು ಬೇಕಾಗುತ್ತದೆ. ಅದರಲ್ಲಿ 1.5 ಎಂಜಿಡಿ ನೇತ್ರಾವತಿಯಿಂದ ಕಂಪನಿಗೆ ಪೂರೈಕೆ ಮಾಡಲಾಗುತ್ತದೆ. ಶೌಚಾಲಯ ಸೇರಿದಂತೆ ಇತರ ತ್ಯಾಜ್ಯ ನೀರನ್ನು ಎಂಬಿಆರ್ ಯುನಿಟ್ ಮೂಲಕ ಸಂಸ್ಕರಿಸಿ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಂಗಳೂರು ಪಾಲಿಕೆಯಿಂದ ಪೂರೈಕೆಯಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. 1.5 ಎಂಜಿಡಿ ಬದಲು, 1 ಎಂಜಿಡಿಗಿಂತಲೂ ಕಡಿಮೆ ನೀರು ಬರುತ್ತಿದೆ. ನೀರಿನ ರೇಷನಿಂಗ್ ಶುರುವಾದ ಕಾರಣ ನಮ್ಮಲ್ಲಿದ್ದ ನೀರಿನ ಸಂಗ್ರಹವೂ ಖಾಲಿಯಾಗುತ್ತಾ ಬಂದಿದೆ. ಹಾಗಾಗಿ ಕಾರ್ಖಾನೆ ಮುಚ್ಚದೇ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಎಂಸಿಎಫ್ನ ಪ್ರಮುಖ ಉತ್ಪನ್ನವಾದ ಯೂರಿಯಾ. ರಸಗೊಬ್ಬರವನ್ನು ಕೇಂದ್ರ ರಸಗೊಬ್ಬರ ಸಚಿವಾಲಯ ಎಂಸಿಎಫ್ನಿಂದ ಖರೀದಿಸಿ, ವಿವಿಧ ರಾಜ್ಯಗಳಿಗೆ ವಿತರಣೆ ಮಾಡುತ್ತದೆ. ಅದರಂತೆ ರಾಜ್ಯದ ಬಹುತೇಕ ಕೃಷಿಕರಿಗೆ ಎಂಸಿಎಫ್ನಿಂದಲೇ ಯೂರಿಯಾ ಪೂರೈಕೆಯಾಗುತ್ತದೆ. ಎಂಸಿಎಫ್ ಸರಾಸರಿ ದಿನಕ್ಕೆ 1600 ಟನ್ ಯೂರಿಯಾ, 800 ಟನ್ನಷ್ಟು ಡಿಎಪಿ ಗೊಬ್ಬರ ಮತ್ತು 700 ಟನ್ನಷ್ಟು ಅಮೋನಿಯಾ ಉತ್ಪಾದಿಸುತ್ತದೆ.