ಮೂಡುಬಿದಿರೆ, ಮೇ ೧೪ (Daijiworld News/SM): ಇಲ್ಲಿಗೆ ಸಮೀಪದ ನಿಡ್ಡೋಡಿ ಗ್ರಾಮದ ಕೊಲತ್ತಾರು ಪದವು ಎಂಬಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸ್ಥಳೀಯ ಭೌಗೋಳಿಕ ಛಾಯಾಗ್ರಹಣ ಮತ್ತಿತರ ದಾಖಲೆ ಸೆರೆಹಿಡಿಯಲು ಮಂಗಳವಾರ ಆಗಮಿಸಿದ್ದ ದೆಹಲಿ ಮೂಲದ ಸಂಸ್ಥೆ ಕಾರ್ಯಕರ್ತರಿಗೆ ಸ್ಥಳೀಯ ಗ್ರಾಮಸ್ಥರು ಹಾಗೂ ಮಾತೃಭೂಮಿ ಸಂರಕ್ಷಣಾ ಸಮಿತಿ ಕಾರ್ಯಕರ್ತರು ತಡೆಯೊಡ್ಡಿದ್ದಾರೆ.
ಮೇ ೧೪ರ ಮಂಗಳವಾರದಂದು ಅದಾನಿ ವಿದ್ಯುದೀಕರಣ ಸಂಸ್ಥೆಯ ವಿದ್ಯುತ್ ಪ್ರಸರಣ ಕಾರ್ಯಕ್ಕೆಂದು ದೆಹಲಿ ಗ್ಲೋಬಲ್ ಎನರ್ಜಿ ಪ್ರೈ.ಲಿ. ಸಂಸ್ಥೆಯ ಮೂವರು ಸಿಬ್ಬಂದಿ ಡ್ರೋನ್ ಕ್ಯಾಮೆರಾ ಮೂಲಕ ಛಾಯಾಚಿತ್ರ ಸೆರೆಹಿಡಿಯಲು ಯತ್ನಿಸಿದಾಗ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಸಂಸ್ಥೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಛಾಯಾಚಿತ್ರ ಸೆರೆಹಿಡಿಯುವ ಕಾರಣ ಮತ್ತು ಉದ್ದೇಶ ತಿಳಿಸುವಂತೆ ಪಟ್ಟುಹಿಡಿದ ಸ್ಥಳೀಯರಿಗೆ ಸೂಕ್ತ ಮಾಹಿತಿ ಹಾಗೂ ದಾಖಲೆ ನೀಡುವಲ್ಲಿ ವಿಫಲರಾದರು. ತಮ್ಮನ್ನು ಬಿಟ್ಟುಬಿಡುವಂತೆ ಸಂಸ್ಥೆಯವರು ವಿನಂತಿಸಿದರಾದರೂ ಅದಕ್ಕೊಪ್ಪದ ಪ್ರತಿಭಟನಾಕಾರರು ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯರಿಗೆ ಮಾಹಿತಿ ನೀಡದೆ ಆಗಮಿಸಿದ್ದುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.