ಮಂಗಳೂರು, ಮೇ14(Daijiworld News/SS): ದೇಶದ ಎಲ್ಲೆಡೆ ನೆಲೆಸಿರುವ ಮುಸ್ಲಿಮರು ರಂಜಾನ್ ತಿಂಗಳ ಉಪವಾಸ ಆಚರಿಸುತ್ತಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ ಒಂಬತ್ತನೇ ತಿಂಗಳು ‘ರಂಜಾನ್’ ಆಗಿದ್ದು, ಪುಣ್ಯ ಸಂಪಾದಿಸುವ ಮಾಸ ಎನಿಸಿಕೊಂಡಿದೆ.
ಇಸ್ಲಾಮಿನ ಐದು ಕಡ್ಡಾಯ ಕರ್ಮಗಳಲ್ಲಿ ರಂಜಾನ್ ಉಪವಾಸ ಕೂಡಾ ಒಂದು. ಮುಸ್ಲಿಮರು ಈ ತಿಂಗಳ 30 ದಿನ ಉಪವಾಸ ಆಚರಿಸುವ ಜತೆಗೆ ದಾನ ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನೂ ಉಪವಾಸ ಕಲಿಸಿಕೊಡುತ್ತದೆ. ಆದರೆ ವಾತಾವರಣದಲ್ಲಿ ಬಿಸಿಲ ತಾಪ ಏರುತ್ತಲೇ ಇರುವುದರಿಂದ ಮುಸಲ್ಮಾನ ಬಾಂಧವರ ಪಾಲಿಗೆ ಈ ಬಾರಿಯ ಉಪವಾಸ ವೃತ ಕಠಿಣವಾಗಿದೆ.
ರಂಜಾನ್ ಉಪವಾಸ ‘ಸಹ್ರಿ’ ಯಿಂದ ಆರಂಭವಾಗಿ ‘ಇಫ್ತಾರ್’ ನೊಂದಿಗೆ ಕೊನೆಗೊಳ್ಳುತ್ತದೆ. ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮುನ್ನ ಸೇವಿಸುವ ಆಹಾರಕ್ಕೆ ‘ಸಹ್ರಿ’ ಎನ್ನುವರು. ‘ಸಹ್ರಿ’ ಸಮಯ ಕಳೆದ ಬಳಿಕ ಆಹಾರ ಸೇವಿಸಿದರೆ ಉಪವಾಸ ಭಂಗವಾಗುತ್ತದೆ. ‘ಇಫ್ತಾರ್’ ಸಮಯ ಸಂಜೆ 6.42 ಆಗಿದೆ. ಅಂದರೆ ಒಟ್ಟು ಉಪವಾಸದ ಅವಧಿ 14 ಗಂಟೆಗಳು ಆಗಿವೆ.
‘ರಂಜಾನ್’ ಎಂದು ಅರಬ್ಬಿ ಭಾಷೆಯಲ್ಲಿ ಕರೆಯಲಾಗುವ ಈ ತಿಂಗಳು ಮುಸ್ಲಿಮರ ಪಾಲಿಗೆ ಬಹಳ ಶ್ರೇಷ್ಠ ತಿಂಗಳು. ಈ ತಿಂಗಳು ಪೂರ್ತಿ ಜಗತ್ತಿನ ಎಲ್ಲಾ ಪ್ರದೇಶಗಳಲ್ಲಿ ಚದುರಿ ಹೋಗಿರುವ ಮುಸ್ಲಿಮರು ಏಕಕಾಲದಲ್ಲಿ ಜತೆಯಾಗಿ ಉಪವಾಸವನ್ನು ಆಚರಿಸುವುದು ಈ ತಿಂಗಳ ವಿಶೇಷತೆ. ರಂಜಾನ್ ಸ್ವಶುದ್ಧೀಕರಣದ ತಿಂಗಳು. ನೈತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣಗೊಳ್ಳುವ ತಿಂಗಳಾಗಿ ಮುಸ್ಲಿಮರು ಈ ತಿಂಗಳನ್ನು ಸ್ವೀಕರಿಸುತ್ತಾರೆ.
ಕಳೆದ ವರ್ಷ ಮೇ 15ರ ಬಳಿಕ ರಂಜಾನ್ ಆರಂಭಗೊಂಡು ಜೂನ್ ಮೊದಲ ವಾರದಲ್ಲಿ ಮುಕ್ತಾಯವಾಗಿತ್ತು. ಈ ವರ್ಷ ಮೇ ಆರಂಭದಲ್ಲೇ ರಂಜಾನ್ ಆರಂಭವಾಗಿದ್ದು, ಜೂನ್ ಆರಂಭಕ್ಕೆ ಹಬ್ಬ ಮುಗಿಯಲಿದೆ. ಈ ಹಿಂದೆಯೂ ಬೇಸಿಗೆಯಲ್ಲಿ ರಂಜಾನ್ ತಿಂಗಳು ಬಂದಿತ್ತು. ಆದರೆ ಈ ಬಾರಿಯಷ್ಟು ಬಿಸಿಲು ಹಿಂದೆಂದೂ ಇರಲಿಲ್ಲ. ಹೀಗಾಗಿ, ಈ ಬಾರಿಯ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಕಠಿಣವಾಗಲಿದೆ.