ಮಂಗಳೂರು, ನ 23: ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಕ್ಕೆ ತೆರಳಿ ಗೃಹ ಬಂಧನದಲ್ಲಿ ಸಿಲುಕಿಕೊಂಡಿದ್ದ ಮಹಿಳೆಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆಯನ್ನು ಪಾರು ಮಾಡಲು ಇಂಡಿಯನ್ ಸೋಶಿಯಲ್ ಫೋರಮ್ ನಡೆಸಿದ ಪ್ರಯತ್ನವು ಯಶಸ್ವಿಯಾಗಿದೆ. 44 ವರ್ಷದ ವಿಜಯಾ ಎಂಬುವವರು ಇದೇ ನವೆಂಬರ್ 26ರಂದು ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.
ಈ ಬಗ್ಗೆ ಸೌದಿ ಪ್ರಾಯೋಜಕ ದಾಯ್ಜಿವರ್ಲ್ಡ್ ನ್ಯೂಸ್ ಗೆ ಹಾಗೂ ಇಂಡಿಯನ್ ಸೋಶಿಯಲ್ ಫೋರಮ್ ಗೆ ಖಚಿತ ಮಾಹಿತಿ ನೀಡಿದ್ದಾರೆ. ಪ್ರಾಯೋಜಕನೇ ನೇರವಾಗಿ ದಮಾಮ್ ವಿಮಾನ ನಿಲ್ದಾಣಕ್ಕೆ ಕರೆ ತಂದು ಎಮಿಗ್ರೇಶನ್ ವ್ಯವಸ್ಥೆ ಮಾಡಲಿದ್ದಾರೆ.
ಬಡ ಕುಟುಂಬಕ್ಕೆ ಆಸರೆಯಾಗಿದ್ದ ವಿಜಯಾರವರು 2015ರಲ್ಲಿ ಸೌದಿಅರೇಬಿಯದ ದಮಾಮ್ ಗೆ ತೆರಳಿದ್ದರು. ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು ಅನಂತರದ ದಿನಗಳಲ್ಲಿ ವಿಜಯಾರವರು ಸರಿಯಾಗಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಂದಾಗಿ ಅನಾರೋಗ್ಯ ಪೀಡಿತ ಪತಿ ಬಾಲಪ್ಪ ಬಾಲಕೃಷ್ಣ ಮತ್ತು ಮಗ ಜಗಜೀವನ್ ಸಾಕಷ್ಟು ಸಂಕಟ ಮತ್ತು ಆತಂಕಕ್ಕೊಳಗಾಗಿದ್ದರು.
ಈ ಬಗ್ಗೆ ಎಸ್ ಡಿಪಿಐ, ಇಂಡಿಯನ್ ಸೋಶಿಯಲ್ ಫೋರಮ್ ನ ಗಮನಕ್ಕೂ ತಂದಿತ್ತು. ಹೀಗಾಗಿ ಪ್ರಕರಣವು ಭಾರತೀಯ ರಾಯಭಾರ ಕಚೇರಿಯಲ್ಲಿ ದಾಖಲಾಗಿ ಅವರ ಬಿಡುಗಡೆಗಾಗಿ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಿಸಿತ್ತು. ಇದೀಗ ಸೌದಿ ಪ್ರಾಯೋಜಕನು ವಿಜಯಾರನ್ನು ನೇರವಾಗಿ ಭೇಟಿಯಾಗಲು ಯಾರಿಗೂ ಅವಕಾಶ ನೀಡದೆ ನೇರವಾಗಿ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾನೆ. ನವೆಂಬರ್ 26ರಂದು ವಿಜಯಾರವರು ದಮಾಮ್ - ಮುಂಬೈ - ಮಂಗಳೂರು ಮಾರ್ಗವಾಗಿ ಮಂಗಳೂರಿಗೆ ಬಂದಿಳಿಯಲಿದ್ದಾರೆ.