ಉಡುಪಿ, ಮೇ 15 (Daijiworld News/MSP): ಮಲ್ಪೆ ಬಂದರಿನಿಂದ ಸುವರ್ಣ ತ್ರಿಭುಜ ಬೋಟ್ನಲ್ಲಿ ಆಳ ಸಮುದ್ರ ಮೀನುಗಾರಿಗೆ ತೆರಳಿ ಬಳಿಕ ಕಣ್ಮರೆಯಾದ ಏಳು ಮೀನುಗಾರರ ತಂಡದಲ್ಲಿ ಒಬ್ಬನಾದ ಭಟ್ಕಳದ ನಿವಾಸಿ ರಮೇಶ್ ಶನಿಯಾರ ಮೊಗೇರ(32) ಅವರ ತಮ್ಮನಾದ ಚಂದ್ರಶೇಖರ್ ಶನಿಯಾರ ಮೊಗೇರ (30) ಎಂಬವರು ನಾಪತ್ತೆಯಾದ ಅಣ್ಣನ ಚಿಂತೆಯಲ್ಲಿ ವಿಷ ಸೇವಿಸಿದ ಘಟನೆ ತಡವಾಗಿ ತಿಳಿದುಬಂದಿದೆ.
ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೋಟು ನಾಪತ್ತೆಯಾದಾಗಿನಿಂದ ಅಣ್ಣನ ಚಿಂತೆಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಚಂದ್ರಶೇಖರ್ ಆಹಾರವನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ. ಆದರೆ ಕ್ರಮೇಣ ಅತ್ಯಲ್ಪ ಸುಧಾರಣೆ ಕಂಡಿದ್ದರು. ಆದರೆ ಇತ್ತೀಚೆಗೆ ಅವಶೇಷ ದೊರೆತ ಸುದ್ದಿ ಬಳಿಕ ಮತ್ತೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಅವರಿಗೆ ಜಾಂಡೀಸ್ ಉಲ್ಬಣಿಸಿತ್ತು.
ಚಂದ್ರಶೇಖರ್ ಅವರ ಆರೋಗ್ಯ ಬಿಗಡಾಯಿಸುತ್ತಿದ್ದಂತೆ ನೆರೆಮನೆಯ ಸ್ನೇಹಿತನ ಬಳಿ ತಾನು ಆತ್ಮಹತ್ಯೆಗೆ ನಿರ್ಧರಿಸಿ ಇಲಿ ಪಾಷಾಣ ಸೇವಿಸಿರುವುದಾಗಿ ಸೋಮವಾರದಂದು ತಿಳಿಸಿದ್ದರು. ಇದರಿಂದ ಎಚ್ಚೆತ್ತ ಸ್ನೇಹಿತ ಮಾಧವ ಮತ್ತು ಇನ್ನೋರ್ವ ಸಹೋದರ ಸೋಮವಾರದಂದು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅಂದೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆ ತಂದಿದ್ದಾರೆ. ಅವರ ಲಿವರ್ ಭಾಗಕ್ಕೆ ತೀವ್ರ ಹಾನಿಯಾಗಿದೆ. ರಕ್ತಸ್ರಾವ ಹೆಚ್ಚುತ್ತಿದೆ, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.