ಮಂಗಳೂರು,ಮೇ 15 (Daijiworld News/MSP): ದೈವಪಾತ್ರಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದೈವ ಪಾತ್ರಿ ಸಹಿತ 5 ಮಂದಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬಿಕರ್ನಕಟ್ಟೆಯ ದೈವ ಪಾತ್ರಿ ಲೋಕೇಶ್ ಪೂಜಾರಿ ಬಾಲಕನೋರ್ವನಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ಎಂಬ ಆರೋಪದಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿತ್ತು. ಕೃತ್ಯಕ್ಕೆ ಸಂಬಂಧಿಸಿ ದೈವದ ಪಾತ್ರಿಗೆ ಥಳಿಸಿ, ಆತನ ಕೈಯ್ಯಲ್ಲಿದ್ದ ಕಡಗವನ್ನು ತೆಗೆಸಿರುವ ಹಾಗೂ ತಲೆಕೂದಲು ಕತ್ತಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲ್ಲೆಗೊಳಗಾದ ದೈವ ಪಾತ್ರಿ ಲೋಕೇಶ್ ಪೂಜಾರಿ ಹಾಗೂ ಆತನಿಗೆ ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ನಡೆಸಿರುವುದನ್ನು ದೈವ ಪಾತ್ರಿ ಒಪ್ಪಿಕೊಂಡಿದ್ದು, ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಕಾನೂನು ಕೈಗೆತ್ತಿಕೊಂಡು ಆತನ ಮೇಲೆ ಹಲ್ಲೆ ಮಾಡಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದವರ ವಿರುದ್ಧ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.