ಮಂಗಳೂರು,ಮೇ 15 (Daijiworld News/MSP): ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಯ ಬರ್ಬರ ವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವಿವಿಧೆಡೆ ಎಸೆದು ಪರಾರಿಯಾಗಿರುವ ಪೈಶಾಚಿಕವಾದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಶೇಷ ಎಂದರೆ ಈ ಕೊಲೆಯಲ್ಲಿ ದಂಪತಿಗಳಿಬ್ಬರು ಭಾಗಿಯಾಗಿದ್ದು , ಬಂಧಿತರನ್ನು ವೆಲೆನ್ಸಿಯಾ ಸೂಟರ್ ಪೇಟೆಯ ಜೋನಸ್ ಜೂಲಿನ್ ಸ್ಯಾಮ್ಸನ್ (36) ಹಾಗೂ ಆತನ ಪತ್ನಿ ಶ್ರೀಮತಿ ವಿಕ್ಟೋರಿಯಾ ಮಥಾಯಿಸ್ (46) ಎಂದು ಗುರುತಿಸಲಾಗಿದೆ.
ಶ್ರೀಮತಿ ಶೆಟ್ಟಿಯಿಂದ ಜೋನಸ್ ಜೂಲಿನ್ ಸಾಲದ ರೂಪದಲ್ಲಿ ಹಣ ಪಡೆದಿದ್ದು, ಸ್ವಲ್ಪ ಬಾಕಿ ತೀರಿಸಿದ್ದರು . ಬಾಕಿ ಉಳಿದ ಹಣವನ್ನು ಶ್ರೀಮತಿ ಶೆಟ್ಟಿ ನೀಡುವಂತೆ ಹಲವಾರು ಬಾರಿ ವಿನಂತಿಸಿದ್ದರು ಹಣ ನೀಡಿದರಲಿಲ್ಲ. ಮೇ. 11 ರಂದು ಹಣ ವಾಪಾಸು ಪಡೆಯುವ ದೃಷ್ಟಿಯಿಂದ ಜೋನಸ್ ಜೂಲಿನ್ ಮನೆಗೆ ತೆರಳಿದ್ದು, ಆಗ ಶ್ರೀಮತಿ ಶೆಟ್ಟಿಯವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾನೆ. ಈ ಸಂದರ್ಭ ಆರೋಪಿಯ ಪತ್ನಿಯೂ ಸಹಕಾರ ನೀಡಿರುವುದು ತಿಳಿದುಬಂದಿದೆ.
ಹಣಕಾಸು ವ್ಯವಹಾರದ ವೈಷಮ್ಯದಿಂದ ಕೊಲೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಹೋದ ವೇಳೆ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪತ್ನಿ ಕೊಲೆಗೆ ಸಹಕಾರ ನೀಡಿರುವ ಆರೋಪವಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಶೆಟ್ಟಿಯವರ 8 ಚಿನ್ನದ ಉಂಗುರ ಹಾಗೂ 1 ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ