ಮಂಗಳೂರು,ಮೇ 15 (Daijiworld News/MSP): ಭಾನುವಾರ ನಗರದಲ್ಲಿ ಪತ್ತೆಯಾಗಿದ್ದ ಮಹಿಳೆಯ ಭೀಕರ ಕೊಲೆ ಪ್ರಕರಣ ಭೇದಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದು ನಾಲ್ಕೇ ದಿನದಲ್ಲಿ ಪ್ರಕರಣವನ್ನು ಭೇದಿಸಿ ಹಂತಕ ಜೋಡಿಯನ್ನು ಬಂಧಿಸಿದ ಪೊಲೀಸರ ಕಾರ್ಯವೈಖರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಟರ್ ಪೇಟೆಯ ಜೋನಸ್ ಸ್ಯಾಮ್ಸನ್ ಹಾಗೂ ಆತನ ಪತ್ನಿ ವಿಕ್ಟೋರಿಯಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಬರುತ್ತಿರುವುದನ್ನು ಕಂಡ ಆರೋಪಿ ಜೋನಸ್ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಫಾದರ್ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ಯೆಯ ಹಿಂದೆ ನಡೆದಿದ್ದೇನು?
ಆರೋಪಿ ಜೋನಸ್ ನಂದಿಗುಡ್ಡೆಯ ಬಳಿ ಫಾಸ್ಟ್ ಪುಢ್ ಅಂಗಡಿ ವ್ಯಾಪಾರ ನಡೆಸುತ್ತಿದ್ದ. ಆದರೆ ಫಾಸ್ಟ್ ಪುಢ್ ವ್ಯಾಪಾರದಲ್ಲಿ ಕೈಸುಟ್ಟುಕೊಂಡಿದ್ದ ಆತ ಕಳೆದ ಒಂದು ತಿಂಗಳಿನಿಂದ ಅಂಗಡಿಯನ್ನು ಮುಚ್ಚಿದ್ದ. ಈ ನಡುವೆ ಶ್ರೀಮತಿ ಶೆಟ್ಟಿ ಅವರಿಂದ 1ಲಕ್ಷ ಸಾಲ ಪಡೆದಿದ್ದ. ಆದರೆ 40 ಸಾವಿರ ಹಣವನ್ನು ಹಿಂತಿರುಗಿಸಿದ್ದ ಆತ ಉಳಿದ 60 ಸಾವಿರ ಹಣವನ್ನು ವಾಪಾಸ್ ನೀಡದೆ ಬಾಕಿ ಉಳಿಸಿಕೊಂಡಿದ್ದ.
ಮೇ. ೧೧ರಂದು ಶನಿವಾರ ಶ್ರೀಮತಿ ಶೆಟ್ಟಿ ಬಾಕಿ ಉಳಿದ ಹಣವನ್ನು ವಾಪಾಸ್ ಕೇಳಲೆಂದು ಜೋನಸ್ ಮನೆಗೆ ತೆರಳಿದ್ದರು. ಆದರೆ, ಹಣ ಹಿಂದಿರುಗಿಸಲು ಆಗದ ಜೋನಸ್, ಕುಪಿತಗೊಂಡು ಶ್ರೀಮತಿ ಶೆಟ್ಟಿಯನ್ನು ತನ್ನ ಮನೆಯಲ್ಲಿಯೇ ಹೊಡೆದು ಕೊಲೆ ಮಾಡಿದ್ದ.
ಆ ಬಳಿಕ ಶನಿವಾರ ದಿನಪೂರ್ತಿ ಶವದೊಂದಿಗೆ ಕಾಲ ಕಳೆದ ಆತ ರಾತ್ರಿ ಆಗುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಶವವನ್ನು ಸಾಗಿಸಲು ಸುಲಭವಾಗುವಂತೆ ರುಂಡ ಮುಂಡ ಕಾಲಿನ ಭಾಗವನ್ನು ತುಂಡರಿಸಿ, ನಗರದ ಮೂರು ಕಡೆ ಮೃತದೇಹದ ಭಾಗಗಳಲ್ಲಿ ಎಸೆದಿದ್ದ. ಆ ಬಳಿಕ ಶ್ರೀಮತಿ ಶೆಟ್ಟಿಯ ದ್ವಿಚಕ್ರ ವಾಹನವನ್ನು ನಾಗುರಿಯ ಬಳಿ ಗ್ಯಾರೇಜ್ ನಲ್ಲಿ ಇರಿಸಿದ್ದ. ಆ ಬಳಿಕ ಕೃತ್ಯಕ್ಕೆ ಬಳಸಿದ ತನ್ನ ದ್ವಿಚಕ್ರ ವಾಹನವನ್ನು ತನ್ನ ಸ್ನೇಹಿತನ ಮನೆ ಬಳಿ ನಿಲ್ಲಿಸಿ ತನಗೇನೂ ತಿಳಿಯದಂತೆ ಸುಮ್ಮನಾಗಿದ್ದ.
ಇದೀಗ ಕೃತ್ಯಕ್ಕೆ ಜೋನಸ್ ಬಳಸಿದ್ದ ದ್ವಿಚಕ್ರವಾಹನ ಹಾಗೂ ಕೊಲೆಯಾದ ಶ್ರೀಮತಿ ಶೆಟ್ಟಿ ಮೈಮೇಲಿದ್ದ ಚಿನ್ನದ ಸರ ಹಾಗೂ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ ತಿಳಿಸಿದರು. ಜೋನಸ್ ಪತ್ನಿ ವಿಕ್ಟೋರಿಯಾ ಕೂಡ ಕೊಲೆಯಾದ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು