ಮಂಗಳೂರು, ಜು.05(DaijiworldNews/AA): ಮನೆಯೊಂದರಲ್ಲಿ ನಗದು ಹಾಗೂ ಚಿನ್ನಾಣಭರಣ ಕಳುವಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆ ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಶೇಕಬ್ಬ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ರಾತ್ರಿ ಊಟದ ಬಳಿಕ ಶೇಕಬ್ಬ ಅವರು ಹೆಂಡತಿ ಮತ್ತು ಮಕ್ಕಳು ಮಲಗಲು ತೆರಳಿದ್ದಾರೆ. ಮಲಗುವ ಮೊದಲು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶೇಕಬ್ಬ ತನ್ನ ಅಳಿಯನೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆಗೆ ಕಳ್ಳತನ ನಡೆದಿರಲಿಲ್ಲ. ಆದರೆ ಮುಂಜಾನೆ 4:30ರ ಸುಮಾರಿಗೆ ಶೇಕಬ್ಬ ಅವರ ಮಗಳು ವಾಶ್ರೂಮ್ಗೆ ಹೋಗಲು ಎಚ್ಚರವಾದ ವೇಳೆಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕುಟುಂಬದ ಸದಸ್ಯರು ಮನೆಯ ಮುಂಭಾಗದಲ್ಲಿ ಮಲಗಿದ್ದರು. ಕಳ್ಳರು ಮುಂಭಾಗದ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದು, ಹಿಂದಿನ ಬಾಗಿಲನ್ನು ರಾಡ್ ಬಳಸಿ ತೆರೆದಿದ್ದಾರೆ. ಬಳಿಕ ಮನೆಗೆ ನುಗ್ಗಿದ ಕಳ್ಳರು ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ನಗದು ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮುಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾಧರ್ ಭೇಟಿ ನೀಡಿದ್ದು, ಇವರೊಂದಿಗೆ ಕಾಂಗ್ರೆಸ್ ಮುಖಂಡ ಸಾಹುಲ್ ಹಮೀದ್ ಭೇಟಿ ನೀಡಿದ್ದಾರೆ. ಇನ್ನು ಪಕ್ಕದ ವಿಜಿತ್ ಶೆಟ್ಟಿ ಎಂಬುವವರಿಗೆ ಸೇರಿದ ಮನೆಯ ಕಿಟಕಿಯಲ್ಲಿ ಹಣವಿದ್ದ ವ್ಯಾನಿಟಿ ಬ್ಯಾಗ್ ಒಂದನ್ನು ಕಳ್ಳರು ಕದ್ದೊಯ್ದಿದ್ದಾರೆ.