ಬಂಟ್ವಾಳ, ಜು.05(DaijiworldNews/AA): ಸ್ನೇಹಿತರ ಜೊತೆ ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ.



ಮೃತರನ್ನು ಮೈಕಲ್ (53) ಎಂದು ಗುರುತಿಸಲಾಗಿದೆ.
ಸುರತ್ಕಲ್ ನ ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿಂದ ನೆಂಟರ ಮನೆಗೆ ಬಂದ ವ್ಯಕ್ತಿಗಳು ಸೇರಿದಂತೆ ನಾಲ್ಕು ಮಂದಿ ಗುರುವಾರ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಬಂಟ್ವಾಳದ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಸಮೀಪದ ಕಿಂಡಿ ಅಣೆಕಟ್ಟಿಗೆ ಹೋಗಿದ್ದರು. ಈ ವೇಳೆ ಮೈಕಲ್ ಆಯತಪ್ಪಿ ನೀರಿಗೆ ಬಿದ್ದಿದ್ದರು.
ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದು ದೋಣಿಯ ಮೂಲಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ನಂತರ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸಿದರೂ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿತ್ತು. ಹಾಗಾಗಿ ಇಂದು ಬೆಳಗ್ಗೆ ಶೋಧಕಾರ್ಯ ಮುಂದುವರೆಸಿದ್ದು, ಮೃತದೇಹ ಪತ್ತೆಯಾಗಿದೆ.