ಮಂಗಳೂರು, ಜು.05(DaijiworldNews/AA): ಪಾವೂರು ಮತ್ತು ಉಳಿಯ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ.

ಪಾವೂರು ಮತ್ತು ಉಳಿಯಾ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಗೆ ನಡೆಸುತ್ತಿರುವುದರಿಂದ ಪ್ರಸಕ್ತ ಮಳೆಗಾಲದಲ್ಲಿ ಸಂಭಾವ್ಯ ವಿಪತ್ತುಗಳು ಉಂಟಾಗುತ್ತಿದೆ. ಮಂಗಳೂರು ತಾಲೂಕಿನ ಪಾವೂರು ಮತ್ತು ಉಳಿಯಾ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಗೆಯ ಬಗ್ಗೆ ತನಿಖೆ ನಡೆಸಿ ಸ್ಪಷ್ಟ ಶಿಫಾರಸ್ಸಿನೊಂದಿಗೆ ವರದಿಯನ್ನು ಸಲ್ಲಿಸಲು ಸಮಿತಿಯನ್ನು ರಚಿಸಲಾಗಿದೆ. ಇನ್ನು ಈ ಸಮಿತಿಯು ಪಾವೂರು ಮತ್ತು ಉಳಿಯಾ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ಬಗ್ಗೆ ತನಿಖೆ ನಡೆಸಿ ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಿರ್ದೇಶಿಸಿದ್ದಾರೆ.
ಜಿಲ್ಲಾಡಳಿತ ರಚಿಸಿರುವ ಈ ಸಮಿತಿಯು ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಎಸ್ ಜೆ, ಎನ್.ಐ.ಟಿ.ಕೆ ಸುರತ್ಕಲ್ ಮಂಗಳೂರಿನ ಪ್ರೋಫೆಸರ್ ರಾಜ್ ಮೋಹನ್, ಪ್ರೋಫೆಸರ್ ಸ್ವಾತಿ, ಮಂಗಳೂರು ದಕ್ಷಿಣದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ನಾಯಕ್, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಂಗಳೂರಿನ ಉಪ ನಿರ್ದೇಶಕರಾದ ಸುಶ್ಮಿತಾ, ಅಂತರ್ಜಲ ಅಭಿವೃದ್ಧಿ ಇಲಾಖೆ ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಶೇಕ್ ದಾವೂದ್ ಅವರನ್ನು ಒಳಗೊಂಡಿರುತ್ತದೆ.