ಬಂಟ್ವಾಳ, ಮೇ ೧೫ (Daijiworld News/SM): ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಪ್ರಥಮ ಆದ್ಯತೆಯಲ್ಲಿ ಕೆಲಸ ಮಾಡಲು ಜಿ.ಪಂ.ಸಿಇಒ ಡಾ| ಸೆಲ್ವಮಣಿ ಸೂಚನೆ ನೀಡಿದ್ದಾರೆ.
ಅವರು ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ತಾಲೂಕು ಮಟ್ಟದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಸೂಚನೆ ನೀಡಿದ್ದಾರೆ.
ಟಾಸ್ಕ್ ಫೋರ್ಸ್ ನಲ್ಲಿ ಅನುದಾನಗಳು ಬಂದ ಕಡೆಗಳಲ್ಲಿ ಬೇಡಿಕೆ ಬದ್ದವಾಗಿ ಹೊಸ ಬೋರ್ ವೆಲ್, ಹಳೆಯ ಬೋರ್ ವೆಲ್ ಗಳ ಆಳ ಮಾಡುವುದು ಹಾಗೂ ಹಳೆಯ ಬೋರ್ ವೆಲ್ ಗಳ ಕೆಸರು ತೆಗೆಯುವ ಕೆಲಸ ಗಳು ಇದ್ದಲ್ಲಿ ತುರ್ತಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಪೂರ್ವಯೋಜಿತ ಕಾಮಗಾರಿಗಳ ಬಗ್ಗೆ ರೂಪುರೇಷೆಗಳು ತಯಾರಾಗಿದ್ದು 31 ಕಾಮಗಾರಿಗಳು ನಡೆಯುತ್ತಿದೆ. ಇನ್ನು ಹೆಚ್ಚಿನ ಹಣ ಬೇಕಾದಲ್ಲಿ ಇನ್ನಷ್ಟು ಹಣ ನೀಡಲು ಸರಕಾರ ರೆಡಿಯಾಗಿದೆ ಎಂದು ಅವರು ತಿಳಿಸಿದರು.
ತುರ್ತು ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಎಲ್ಲೆಲ್ಲಿ ಇದೆಯೋ ಅವುಗಳ ಬಗ್ಗೆ ಗರಿಷ್ಠ ಆದ್ಯತೆ ನೀಡಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಸರಕಾರಿ ಬೋರುವೆಲ್ ಗಳಲ್ಲಿ ನೀರು ಇಲ್ಲದ ಕಡೆಗಳಲ್ಲಿ ಖಾಸಗಿ ಬೋರ್ ವೆಲ್ ಗಳ ನೀರು ಪಡೆದು ಸಮಸ್ಯೆಯಿರುವ ಕಡೆಗಳಿಗೆ ಟ್ಯಾಂಕರ್ ಮೂಲಕ ಅಥವಾ ಬೇರೆ ಮೂಲಗಳ ಮೂಲಕ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಲ್ಲದೇ ಬಹುತೇಕ ಕಡೆಗಳಲ್ಲಿ ಈ ಕೆಲಸ ನಡೆಯುತ್ತಿದೆ. ನೀರು ಕೊಡುವ ಖಾಸಗಿ ಬೋರ್ ವೆಲ್ ಗಳ ಮಾಲೀಕರಿಗೆ ಇಲಾಖೆ ಅದರ ಮೌಲ್ಯ ನೀಡಿ ಪಡೆಯುತ್ತದೆ ಎಂದು ಅವರು ಹೇಳಿದರು.
ಆದ್ಯತೆ ಮೇರೆಗೆ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲಿ ಒದಗಿಸುವ ಕಾರ್ಯ ನಡೆಸಿ, ಜೂನ್ ೧ರಂದು ಮಳೆ ಶುರುವಾಗುವ ಮೊದಲು ಸಿದ್ಧತೆಗಳನ್ನೂ ನಡೆಸಬೇಕು. ಯಾವುದೇ ದೂರುಗಳು ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.