ಉಡುಪಿ, ನ 23: ಐತಿಹಾಸಿಕ ಧರ್ಮಸಂಸದ್ಗೆ ಕ್ಷಣಗಣನೆ ಶುರುವಾಗಿದೆ. ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಅಧಿವೇಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬೃಹತ್ ವೇದಿಕೆ, ಸಭಾಂಗಣ ನಿರ್ಮಿಸಲಾಗಿದೆ.
ಇಂದು ಧರ್ಮಸಂಸದ್ ಅಧಿವೇಶನ ಉದ್ಘಾಟನೆಗೊಳ್ಳಲಿದ್ದು, ನಾಳೆ ನಿರ್ಣಯ ಮೇಲಿನ ಚರ್ಚೆ ನಡೆಯಲಿದೆ. 26 ರಂದು ಕೃಷ್ಣಮಠದ ರಾಜಾಂಗಣದಲ್ಲಿ ಮತ್ತು ಧರ್ಮಸಂಸದ್ ನಲ್ಲಿ ಸಮಾಜ ಪ್ರಮುಖರ ಸಭೆ, ನಿರ್ಣಯ ಅಂಗೀಕಾರ ಸಭೆ ನಡೆಯಲಿದೆ. ಸಾವಿರಾರು ಸಾಧುಸಂತರು, ಧಾರ್ಮಿಕ ಮುಖಂಡರು ಈ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕೃಷ್ನಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆಗೆ ಸಾಧುಸಂತರ ಸಮ್ಮಿಲನದ ಬಳಿಕ ಭವ್ಯ ಮೆರವಣಿಗೆಯ ಮೂಲಕ ಕಲ್ಸಂಕ ರಾಯಲ್ ಗಾರ್ಡನ್ ನಲ್ಲಿರುವ ಸಭಾಂಗಣಕ್ಕೆ ಸಾಧುಸಂತರು ಆಗಮಿಸಲಿದ್ದಾರೆ. ಅನಂತರ ಧರ್ಮಸಂಸದ್ ಉದ್ಘಾಟನಾ ಸಭೆ ನಡೆಯಲಿದೆ.
ಭದ್ರತೆಯ ದೃಷ್ಟಿಯಿಂದ ಉಡುಪಿ ಜಿಲ್ಲೆಯ 2 ಸಾವಿರ ಪೊಲೀಸರು, ಹೊರಜಿಲ್ಲೆಗಳ 1,400 ಹೆಚ್ಚುವರಿ ಪೊಲೀಸರು ಸೇರಿದಂತೆ 3 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.