ಮಂಗಳೂರು, ಜು. 10(DaijiworldNews/AK): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದೆ. ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ.

ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಮಳೆ ಬಿಡುವು ನೀಡಿತ್ತು. ಸಂಜೆಯ ವೇಳೆಗೆ ಭಾರೀ ಮಳೆಯಾಗಿದ್ದು, ನಂತರ ಇಳಿಮುಖವಾಯಿತು.
ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಹಗಲಿನಲ್ಲಿ ಕೆಲವೆಡೆ ಬಿಸಿಲಿನ ವಾತಾವರಣವಿತ್ತು. ಸೋಮವಾರದಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.
ಸೋಮವಾರಕ್ಕೆ ಹೋಲಿಸಿದರೆ ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಕಡಿಮೆಯಾಗಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕುಲಶೇಖರ ಬೆಳ್ಳಿಬಾಗಿಲು ವೀರನಾರಾಯಣ ಕಟ್ಟೆಯಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಶಾಸಕ ವೇದವ್ಯಾಸ್ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜುಲೈ 10 ರಿಂದ 13 ರವರೆಗೆ ಕರಾವಳಿ ಪ್ರದೇಶದಲ್ಲಿ ‘ಯಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಇದು ಗಮನಾರ್ಹ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಮಂಗಳವಾರ, ನಗರದಲ್ಲಿ ಗರಿಷ್ಠ ತಾಪಮಾನ 29.4 ° C ದಾಖಲಾಗಿದೆ, ಇದು ಸರಾಸರಿಗಿಂತ 0.5 ° C ಆಗಿತ್ತು. ಕನಿಷ್ಠ ತಾಪಮಾನವು 22.4 ° C, ಸರಾಸರಿಗಿಂತ 0.8 ° C ಆಗಿದೆ.