ಉಡುಪಿ, ಜು. 10(DaijiworldNews/AA): ಮೂರು ತಿಂಗಳ ಹಿಂದೆ ಡಾಂಬರೀಕರಣಗೊಂಡಿದ್ದ ರಸ್ತೆಯು ಇತ್ತೀಚೆಗೆ ಸುರಿದ ಮಳೆಗೆ ಶಿಥಿಲಗೊಂಡಿದ್ದು, ಅಪಾಯಕಾರಿ ಗುಂಡಿಗಳು ಬಿದ್ದಿರುವ ಘಟನೆ ಉಡುಪಿ ಜಿಲ್ಲಾಸ್ಪತ್ರೆ ಅಜ್ಜರಕಾಡಿನ ಬಳಿ ನಡೆದಿದೆ.














ಬ್ರಹ್ಮಗಿರಿ ಸರ್ಕಲ್ನಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ರಸ್ತೆಯ ಹದಗೆಟ್ಟಿರುವ ಕಾರಣ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರಸ್ತೆಯ ಹೊಂಡಗಳಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿದೆ. ಗುಂಡಿಗಳು ಆಂಬ್ಯುಲೆನ್ಸ್ ಚಲನೆಗೆ ತೊಂದರೆ ಉಂಟಾಗುತ್ತಿದ್ದು, ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಅಪಾಯಕ್ಕೆ ಎದುರಾಗುತ್ತಿದೆ.
ಆರಂಭದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಜಲ್ಲಿಕಲ್ಲು ಮಿಶ್ರಿತ ರಸ್ತೆಯೆಲ್ಲಾ ಹರಡಿಕೊಂಡಿದೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ವಿಶೇಷವಾಗಿ ಆಂಬ್ಯುಲೆನ್ಸ್ ವಾಹನಗಳ ಸಂಚಾರಕ್ಕೆ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ದುಸ್ಥಿತಿ ಕುರಿತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಪರ್ಯಾಯದ ಅವಧಿಯಲ್ಲಿ ಉಡುಪಿಯಲ್ಲಿ ಅಂದಾಜು 5 ಕೋಟಿ ವೆಚ್ಚದ ರಸ್ತೆ ದುರಸ್ತಿ ಕಾಮಗಾರಿಯನ್ನು ನಗರಸಭೆ ಉಸ್ತುವಾರಿ ವಹಿಸಿತ್ತು. ದುರಸ್ತಿ ಕಾರ್ಯದ ಮರುದಿನವೇ ರಸ್ತೆ ಕಳಾಹೀನಗೊಂಡಿದ್ದು, ಇದೀಗ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿನ ಗುಂಡಿಗಳಿಂದ ಪ್ರಯಾಣಿಕರಿಗೆ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಜಲ್ಲಿಕಲ್ಲು ಮಿಶ್ರಿತ ರಸ್ತೆಯ ಮೇಲೆ ಹರಡಿ ರಸ್ತೆ ಜಾರುವಂತಾಗಿದೆ.
ಹಿಂದಿನ ಕಾಮಗಾರಿಗಳಿಗೆ ಹೋಲಿಸಿದರೆ ಇತ್ತೀಚೆಗೆ ನವೀಕರಣಗೊಂಡ ರಸ್ತೆ ಸದೃಢವಾಗಿಲ್ಲ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಗೆ ಸಂಬಂಧಿಸಿದ ಪ್ರಾಧಿಕಾರದ ಉಸ್ತುವಾರಿಯನ್ನು ನಿಲ್ಲಿಸಬೇಕು. ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರು ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರಸ್ತೆಯ ಗುಂಡಿಗಳು ಸ್ಥಳಿಯ ನಾಗರಿಕರಿಗೆ ಹಾಗೂ ಪ್ರಯಾಣಿಕರಿಗೆ ಅಪಾಯವನ್ನು ತಂದೊಡ್ಡಿದ್ದು, ಆದಷ್ಟು ಬೇಗನೆ ಇದಕ್ಕೆ ಪರಿಹಾರ ಒದಗಿಸಬೇಕು. ಹಾಗೇ ರಸ್ತೆಯನ್ನು ದುರಸ್ತಿ ಮಾಡಬೇಕು ಎಂಬುದು ಸ್ಥಳೀಯ ನಿವಾಸಿಗಳ ಕಳಕಳಿಯಾಗಿದೆ.