ಮಂಗಳೂರು,ಮೇ16(DaijiworldNews/AZM):ದ.ಕ. ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಘೋಷಿಸಿದ್ದು, ಅದರಂತೆ ಮೇ.29ರಂದು ಮತದಾನ ಹಾಗೂ ಮೇ.31ರಂದು ಮತಎಣಿಕೆ ನಡೆಯಲಿದೆ, ಈ ಹಿನ್ನಲೆ ಚುನಾವಣಾ ನೀತಿ ಸಂಹಿತೆ ಇರುವ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚುವಂತೆ ರಾಜ್ಯ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮದಂತೆ ಸೂಚಿಸಲಾಗಿದೆ.
ಪಡುಪೆರಾರ್ ಮತ್ತು ತಲಪಾಡಿ ಗ್ರಾಮ ಪಂಚಾಯತ್, ಪುತ್ತೂರು ತಾಲೂಕಿನ ಕಬಕ ಮತ್ತು ನೆಕ್ಕಿಲಾಡಿ ಗ್ರಾ.ಪಂ. ಹಾಗೂ ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕೊಯ್ಯೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮೇ.13ರಿಂದ ಮೇ.31ರಂದು 7ಗಂಟೆಯಿಂದ ಮಧ್ಯರಾತ್ರಿಯವರೆಗೆ ಮತಎಣಿಕೆ ನಡೆಯುವ ಕೇಂದ್ರಗಳ 3 ಕಿ.ಮೀ. ವ್ಯಾಪ್ತಿ ಪ್ರದೇಶಗಳನ್ನು ಮದ್ಯಮುಕ್ತ ದಿನಗಳೆಂದು ಘೋಷಿಸಿ ಈ ದಿನಗಳಲ್ಲಿ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಮುಚ್ಚಲು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಹಾಗೂ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.