ಮಂಗಳೂರು, ಜು 11(DaijiworldNews/MS): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ, ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆಯು ಕಾವೂರು ಜಂಕ್ಷನ್ ನಲ್ಲಿ ಗುರುವಾರ ಸಂಜೆ ನಡೆಯಿತು.







ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ಶಾಸಕ ಭರತ್ ಶೆಟ್ಟಿ ಅವರು ಡೆಂಟಲ್ ಡಾಕ್ಟ್ರಾ? ಅಥವಾ ಮೆಂಟಲ್ ಡಾಕ್ಟ್ರಾ ? ಅಲ್ಲ ಮೆಂಟಲ್ ಪೇಷೆಂಟಾ ಎಂದು ಪ್ರಶ್ನೆ ಮಾಡಿದ್ದಾರೆ. ದೇಶದ ಪವಿತ್ರ ಸದಸನದಲ್ಲಿ ಹಿಂದೂ ಧರ್ಮ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಹಿಂದೂ ಧರ್ಮ ಅಭಯವನ್ನು ನೀಡುತ್ತದೆ ಎಂದಿದ್ದಾರೆ.
ಬಿಜೆಪಿಗರಿಗೆ ಹೇಳಿದ ಹೇಳಿಕೆಯನ್ನು ಸಮಸ್ತ ಹಿಂದೂಗಳಿಗೆ ಅವಮಾನ ಮಾಡಲಾಗಿದೆ ಎಂದು ತಿರುಚಿ ರಾಹುಲ್ ಗಾಂಧಿಯವರ ವಿರುದ್ಧ ಆಕ್ಷೇಪ ವ್ಯಕ್ತ ಪಡಿಸುವುದು ನಾಚಿಕೆಯ ವಿಚಾರ. ಇದು ಭರತ್ ಶೆಟ್ಟಿಯವರ ಸಂಸ್ಕೃತಿ ಎಂದರು.
ರಾಹುಲ್ ಗಾಂಧಿಯವರ ಕಪಾಲಕ್ಕೆ ಹೊಡೆಯುವುದು ಬಿಡಿ, ಕಾಂಗ್ರೆಸ್ನ ಬೆರಳೆಣಿಕೆಯ ಕಾರ್ಯಕರ್ತರು ನಿಮ್ಮ ಕಚೇರಿಗೆ ಬರುತ್ತೇವೆ ತಾಕತ್ತಿದ್ದರೆ ಕಪಾಲಕ್ಕೆ ಹೊಡೆದು ನೋಡಿ ಎಂದು ಸವಾಲು ಹಾಕಿದ ಅವರು, ಮಂಗಳೂರು ಉತ್ತರ ಕ್ಷೇತ್ರದ ಜನರು ಮುಂದಿನ ದಿನಗಳಲ್ಲಿ ನಿಮ್ಮ ಕೆನ್ನೆಗೆ ಬಾರಿಸಿ ಮನೆಗೆ ಕಳುಹಿಸುತ್ತಾರೆ ಎಂದು ಭವಿಷ್ಯ ನುಡಿದರು.
ನಿಮ್ಮ ಕ್ಷೇತ್ರದ ಕೂಳೂರು ಸೇತುವೆ ಪೂರ್ಣಗೊಂಡಿಲ್ಲ. ಸುರತ್ಕಲ್ ಮೂಡ ಮಾರುಕಟ್ಟೆ ಪೂರ್ಣಗೊಂಡಿಲ್ಲ ಈ ಬಗ್ಗೆ ಎಲ್ಲಿಯಾದರೂ ಒಂದಕ್ಷರ ಮತನಾಡಿದ್ದೀರಾ ಇಲ್ಲ. ನಿಮಗೆ ನಾಚಿಕೆಯಗಬೇಕು. ನಿಮ್ಮ ಅಭಿವೃದ್ಧಿಯ ಕುರಿತು ಮಾತನಾಡಿ ಎಂದು ಶಾಸಕ ಭರತ್ ಶೆಟ್ಟಿ ಅವರಿಗೆ ತಿರುಗೇಟು ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ, ಬಿಜೆಪಿಗರದ್ದು ನಕಲಿ ಹಿಂದುತ್ವ, ಬಿಜೆಪಿ ಕಳೆದ 40ವರ್ಷಗಳಿಂದ ಹಿಂದೂ ಎಂದರೆ ಬಿಜೆಪಿ ಎಂದು ಬಿಂಬಿಸಿಕೊಂಡು ಹಿಂದೂ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸಮಾಡುತ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ, ಕಾಂಗ್ರೆಸ್ ನಲ್ಲಿರುವವರೆಲ್ಲ ಹಿಂದೂಗಳಲ್ಲ. ಅವರೆಲ್ಲ ಹಿಂದೂ ವಿರೋಧಿಗಳೆಂದು ನೀಡುತ್ತಿರುವ ಹೇಳಿಕೆಯನ್ನು ಬಿಜೆಪಿ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಷ್ಟೇ ಪ್ರಭಾವಶಾಲಿ ನಾಯಕ ಇಂತಹಾ ಹೇಳಿಕೆ ನೀಡಿದರೂ ಸರಿ ಅವರಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಸಿದ್ಧವಾಗಿದೆ ಎಂದರು.
ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತದೆ. ಇದನ್ನು ತಡೆದು ಒಂದು ಸಮುದಾಯವನ್ನು ಬೇರ್ಪಡಿಸುವ ಹುನ್ನಾರದ ಭಾಗವೇ ಹಿಂದುತ್ವ. ಬಿಜೆಪಿಯ ವಿರುದ್ಧ ಮಾತನಾಡುವ ಎಲ್ಲರನ್ನೂ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹಿಂದೂಗಳ ಶಂಕರ ಮಠವನ್ನು ಹಿಂದೂ ವಿರೋಧಿ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಯ ಡೋಂಗಿ ಹಿಂದುತ್ವವನ್ನು ಕಾಂಗ್ರೆಸ್ ಜನರ ಮುಂದೆ ಅನಾವರಣ ಗೊಳಿಸಲಿದೆ ಎಂದ ಅವರು, ರಾಹುಲ್ ಗಾಂಧಿಯ ಕೆನ್ನೆಗೆ ಹೊಡೆಯುತ್ತೇನೆ ಎನ್ನುವ ಭರತ್ ಶೆಟ್ಟಿ ಮೊದಲು ನಮ್ಮ ಕಾರ್ಯಕರ್ತರ ಕೆನ್ನೆಗೆ ಹೊಡೆದು ನೋಡಲಿ ಎಂದು ಸವಾಲು ಹಾಕಿದರು.
ಪ್ರತಿಭಟನಾ ಸಭೆಯಲ್ಲಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಸುರತ್ಕಲ್ ಬ್ಲಾಕ್ ಕಂಗ್ರೆಸ್ ಅಧ್ಯಕ್ಷ ಪುರುಶೋತ್ತಮ ಚಿತ್ರಾಪುರ ಮಾತನಾಡಿ, ಸುರತ್ಕಲ್ ಬ್ಲಾಕ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪ್ರತಿಭಟನಾ ಸಭೆಯ ಬಳಿಕ ಪ್ರತಿಭಟನಾಕಾರರು ಕಾವೂರಿನ ಶಾಸಕ ಭರತ್ ಶೆಟ್ಟಿಯುವರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಆಗ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ಪಡಬೇಕಾಯಿತು. ಕಚೇರಿಯ 50ಮೀಟರ್ ಅಂತರದಲ್ಲಿ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಪಣಂಬೂರು, ಬಜ್ಪೆ, ಕಾವೂರು ಪೊಲೀಸ್ ಠಾಣೆಗಳಿಗೆ ರವಾನಿಸಿದರು.