ಮಂಗಳೂರು,ಜು 12(DaijiworldNews/ AK): ಪಡೀಲ್ ಪಂಪ್ವೆಲ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಸ್ವಾರ್ಟ್ಸಿಟಿ ಈವರೆಗೂ ರಸ್ತೆ ನಿರ್ಮಿಸದೆ ಬೇಜವಾಬ್ದಾರಿ ವಹಿಸಿದೆ. ಕಳೆದ ಎರಡು ವರ್ಷಗಳಧಿಕ ಈ ರಸ್ತೆ ನಿರ್ಮಾಣ ಕೆಲಸಗಳಿಂದ ದಿನನಿತ್ಯ ಓಡಾಡುವ ಜನ ಪರಿತಪಿಸುವಂತಾಗಿದೆ. ನಗರದಾದ್ಯಂತ ಅಭಿವೃದ್ಧಿ ಕಾಮಗಾರಿಗಳ ಅವ್ಯವಸ್ಥೆ ನೋಡಿದರೆ ಇದೆಲ್ಲಾ ಶಾಸಕ ವೇದವ್ಯಾಸರ ಮುಖಕ್ಕೆ ಹಿಡಿದ ಕೈಗನ್ನಡಿ ಎಂದು ಸಿಪಿಐಎಂ ಸಮಿತಿಯ ಸುನೀಲ್ ಕುಮಾರ್ ಬಜಾಲ್ ಕಿಡಿಕಾರಿದರು. ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಮೇಯರ್ ಕಚೇರಿಗೆ ಮುತ್ತಿಗೆ ಹೋರಾಟ ಕೈಗೊಳ್ಳಲಿದ್ದಾರೆಂದು ಎಚ್ಚರಿಸಿದರು.

ಅವರು ಇಂದುನಾಗುರಿ ಜಂಕ್ಷನ್ ನಲ್ಲಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ಪಡೀಲ್ ಪಂಪ್ವೆಲ್ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ, ಪಂಪ್ವೆಲ್ ಪಡೀಲ್ ರಸ್ತೆ ಕಾಮಗಾರಿ ಆಮೆ ವೇಗ ಮಾತ್ರವಲ್ಲ ಕಳಪೆ ಮಟ್ಟದಿಂದ ಕೂಡಿದೆ. ಅಳಪೆ ಕೆಂಬಾರ್, ರೈಲ್ವೇ ಸ್ಟೇಷನ್ ಬಳಿ ನಿರ್ಮಿಸುವ ರಸ್ತೆಯನ್ನೊಮ್ಮೆ ಗಮನಿಸಬೇಕು. ಒಂದು ಕಡೆ ಎತ್ತರ ಇನ್ನೊಂದೆಡೆ ತಗ್ಗುಗಳಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಬಿಜೆಪಿ ಆಡಳಿತದಲ್ಲಿ ಯಾವೊಂದು ಕಾಮಗಾರಿಗಳನ್ನು ಸರಿಯಾಗಿ ನಿರ್ಮಿಸುತ್ತಿಲ್ಲ ಜನರ ಭಾವನಾತ್ಮಕ ಪ್ರಶ್ನೆಯನ್ನಿಟ್ಟು ಇತ್ತೀಚೆಗೆ ನಿರ್ಮಿಸಿದ ರಾಮ ಮಂದಿರವೇ ಸೋರುತ್ತಿವೆ. ದೆಹಲಿ ವಿಮಾನ ನಿಲ್ದಾಣ ಕುಸಿದಿದೆ. ಬಿಹಾರದಲ್ಲಿ 17 ದಿನಕ್ಕೆ 13 ಸೇತುವೆಗಳು ಬಿದ್ದು ಹೋಗಿವೆ. ಇನ್ನು ಮಂಗಳೂರು ಈ ಘಟನೆಗಳಿಗೆ ಹೊರತಾಗಿಲ್ಲ. ಈ ರೀತಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಅಭಿವೃದ್ಧಿ ಕಾಮಗಾರಿಯ ಬೇಜಬಾವ್ದಾರಿಗೆ ಯಾರ ಕೆನ್ನೆಗೆ ಬಾರಿಸಬೇಕೆಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಉತ್ತರಿಸಬೇಕೆಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ ಇಮ್ತಿಯಾಜ್, ಯೋಗೀಶ್ ಜಪ್ಪಿನಮೊಗರು, ನಗರ ಸಮಿತಿ ಸದಸ್ಯರಾದ ಸಾಧಿಕ್ ಕಣ್ಣೂರು, ಡಿವೈಎಫ್ಐ ಮುಖಂಡ ಜಗದೀಶ್ ಬಜಾಲ್, ದಲಿತ ಸಂಘಟನೆಯ ಮುಖಂಡರಾದ ಕಮಲಾಕ್ಷ ಬಜಾಲ್, ಮದರ್ ತೆರೆಜಾ ವಿಚಾರರ ವೇದಿಕೆಯ ಡೋಲ್ಪಿ ಡಿಸೋಜ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಮ್ ಮಾಧವ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮಿಳಾ ದೇವಾಡಿಗ, ಯೋಗಿತಾ ಜಪ್ಪಿನಮೊಗರು ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ಸಂಚಾಲಕರಾದ ದೀಪಕ್ ಬಜಾಲ್, ವರಪ್ರಸಾದ್, ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡೆ, ಧೀರಾಜ್ ಬಜಾಲ್, ಉದಯಚಂದ್ರ ರೈ, ಇಸಾಕ್ ಕಣ್ಣೂರು, ಅಶೋಕ, ಆನಂದ ಎನೆಲ್ಮಾರ್, ಸಿಂಚನ್, ತೇಜಸ್ವಿನಿ ಮುಂತಾವರು ವಹಿಸಿದ್ದರು