ಉಡುಪಿ, ಮೇ 16 (Daijiworld News/MSP): ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾದ ಭಟ್ಕಳದ ಮೀನುಗಾರ ರಮೇಶ್ ಮೊಗೇರ ಅವರ ಚಿಂತೆಯಲ್ಲಿ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅವರ ಸಹೋದರ ಚಂದ್ರಶೇಖರ್ ಮೊಗೇರ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ.16 ರ ಗುರುವಾರ ಮೃತಪಟ್ಟಿದ್ದಾರೆ.
ಉಡುಪಿ ಆದರ್ಶ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಇವರು ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿದ್ದರು. ಬೋಟ್ ನಾಪತ್ತೆಯಾದ ದಿನದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಚಂದ್ರಶೇಖರ್ ಅವರು ಬೋಟ್ ಅವಶೇಷ ಪತ್ತೆಯ ಸುದ್ದಿ ತಿಳಿದು ಮತ್ತಷ್ಟು ನೊಂದುಕೊಂಡಿದ್ದರೆನ್ನಲಾಗಿದೆ.
ಸೋಮವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಂದ್ರಶೇಖರ ಭಟ್ಕಳದಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು. ಭಟ್ಕಳದ ಶನಿಯಾರ ಮೋಗರ ಅವರ 7 ಮಂದಿ ಮಕ್ಕಳಲ್ಲಿ ಚಂದ್ರಶೇಖರ್ 5ನೆಯವರು. ನಾಪತ್ತೆಯಾದ ರಮೇಶ್ ಸೇರಿ ಅವರಿಗೆ ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು ಮತ್ತು ಇಬ್ಬರು ಅಕ್ಕಂದಿರಿದ್ದಾರೆ. ವೃದ್ಧ – ತಂದೆ ತಾಯಿ ಕಣ್ಣೀರಿನಲ್ಲಿ ಮಗ ರಮೇಶನ ದಾರಿ ಕಾಯುತ್ತಿರುವ ವೇಳೆ ಇದೀಗ ಇನ್ನೊಬ್ಬ ಮಗ ವಿಷ ಸೇವಿಸಿದ ಸಾವನ್ನಪ್ಪಿದ ವಿಚಾರ ತಿಳಿದು ಅಘಾತಕ್ಕೊಳಗಾಗಿದ್ದಾರೆ.