ಹೆಬ್ರಿ, ಜು. 13(DaijiworldNews/AA): ತಾಲೂಕಿನ ನಾಡಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನೇಕ ದಿನಗಳಿಂದ ಒಂಟಿ ಸಲಗ ಬೀಡು ಬಿಟ್ಟು ಜನರಿಗೆ ಜೀವ ಭಯ ಉಂಟುಮಾಡಿದೆ. ಇಲ್ಲಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೌರವ್ ಎಸ್. ಎಂ.ರವರು ಜೀಪ್ ವ್ಯವಸ್ಥೆ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.



ಈ ಪರಿಸರದ ಮಕ್ಕಳಿಗೆ ಶಾಲೆಗೆ ಹೋಗಲು ಭಯವಿರುವ ಬಗ್ಗೆ ಹೆಬ್ರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಗೌರವ್ ಎಸ್.ಎಂ. ಪತ್ರ ಬರೆದಾಗ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿ ಸಿಸಿಎಫ್ ಕರಿಕಾಳನ್, ಡಿಸಿಎಫ್ ಶಿವರಾಮ ಬಾಬು, ಎಸಿಎಫ್ ಪ್ರಕಾಶ್ ಪೂಜಾರಿ, ಆರ್ಎಫ್ಒ ಗೌರವ್ ಎಸ್.ಎಂ., ಡಿಆರ್ಎಫ್ಒ ಜುನೈದ್ ಅಬ್ದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜೀಪ್ ವ್ಯವಸ್ಥೆ ಮಾಡಲಾಗಿದೆ.
ದಿನಕ್ಕೆ ಎಂಟು ಟ್ರಿಪ್: ಅರಣ್ಯ ಇಲಾಖೆ ಜೀಪು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಬರಲು ದಿನಕ್ಕೆ ಎಂಟು ಟ್ರಿಪ್ ಹೊಡೆಯಬೇಕಾಗುತ್ತದೆ. ಶಾಲೆ ಹೋಗುವ ವಿದ್ಯಾರ್ಥಿಗಳಿಗೆ ಬೆಳಗ್ಗೆ ಬೇಗ ಟ್ರಿಪ್ ಮಾಡಿ, ನೆಲ್ಲಿಕಟ್ಟೆಯ ತನಕ ವಿದ್ಯಾರ್ಥಿಗಳನ್ನು ಬಸ್ಸಿಗೆ ತಲುಪಿಸಲಾಗುತ್ತದೆ. ಮೇಗದ್ದೆ, ವಣಜಾರು, ಕೂಡ್ಲು, ಕೆದ್ಭುಮಕ್ಕಿ, ಬೆಳಾರ್ ಕಡೆಯಿಂದ 15 ವಿದ್ಯಾರ್ಥಿಗಳು ದಿನನಿತ್ಯ ಜೀಪಿನಲ್ಲಿ ಸಂಚರಿಸುತ್ತಾರೆ.
ಆನೆ ಓಡಿಸಲು ಪ್ರತಿಭಟನೆ: ಆನೆ ಓಡಿಸಬೇಕೆಂದು ಊರಿನ ಗ್ರಾಮಸ್ಥರೆಲ್ಲರೂ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದ್ದರು. ಇದು ಅರಣ್ಯ ಇಲಾಖೆ ಮೇಲೆ ಬಹಳಷ್ಟು ಒತ್ತಡ ಬೀರಿತು. ಅರಣ್ಯ ಇಲಾಖೆ ಸದಾ ಜನತೆಯೊಂದಿಗೆ ಇದೆ ಎಂದು ತೋರಿಸಿಕೊಡಲು ಇದೊಂದು ವಿನೂತನ ಕಾರ್ಯಕ್ರಮ.
ಈ ಬಗ್ಗೆ ಪ್ರತಿಕ್ರಿಯಿಸಿದ ಹೆಬ್ರಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಗೌರವ್ ಎಂ.ಎಸ್ ಅವರು, ನಮ್ಮ ಇಲಾಖೆ ನಿಂತರವಾಗಿ ಊರಿನ ಜನತೆ ಜತೆ ಇರುತ್ತದೆ. ಆನೆ ದಾಳಿ ಭಯದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಭಯಪಡುತ್ತಿರುವಾಗ, ನನ್ನ ಕೋರಿಕೆಯಂತೆ ಮೇಲಧಿಕಾರಿಗಳು ಶಾಲೆಗೆ ಹೋಗಿ ಬರಲು ಜೀಪ್ ವ್ಯವಸ್ಥೆ ಮಾಡಿದ್ದಾರೆ. ಯಾರು ಧೃತಿಗೆಡಬೇಕಾಗಿಲ್ಲ ಎಂದು ಭರವಸೆ ನೀಡಿದರು.
ಈ ಜೀಪ್ ವ್ಯವಸ್ಥೆ ಕುರಿತು ಪ್ರತಿಕ್ರಿಯೆ ನೀಡಿದ 5ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಅವರು, ಜೀಪ್ ವ್ಯವಸ್ಥೆಯಿಂದ ನಮಗೆ ಆನೆ ಭಯದಿಂದ ಮುಕ್ತಿ ಸಿಕ್ಕಿದೆ. ಶಾಲೆಗೆ ನಮ್ಮನ್ನು ಪಾಲಕರು ಬಿಡಲು ಬರಬೇಕಾಗಿತ್ತು. ಮಳೆಗಾಲದಲ್ಲಿ ಯಾವಾಗಲೂ ಬ್ಯಾಗ್, ಪುಸ್ತಕ ಒದ್ದೆಯಾಗುತ್ತಿತ್ತು. ಜೋರಾಗಿ ಮಳೆ ಬರುವಾಗ ಅಲಲ್ಲಿ ನಿಂತುಕೊಂಡು ಬರುತ್ತಿದ್ದೆವು. ಅರಣ್ಯ ಇಲಾಖೆ ವಿಶೇಷ ಮುತ್ತುವರ್ಜಿ ವಹಿಸಿ ಯೋಜನೆ ರೂಪಿಸಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಇನ್ನು ಪಾಲಕರಾದ ಜ್ಯೋತಿ ಅವರು ಪ್ರತಿಕ್ರಿಯಿಸಿ, ಈ ಭಾಗದಲ್ಲಿ ನಿರಂತರವಾಗಿ ಆನೆ ದಾಳಿ ಮಾಡಿ ಕೃಷಿ ನಾಶ ಮಾಡಿದೆ. ನಿರಂತರ ಆನೆ ತಿರುಗಾಟ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಇರುವುದರಿಂದ ಜೀವ ಭಯ ಇತ್ತು. ಹೋಗಲು ಅರಣ್ಯ ಇಲಾಖೆ ಜೀಪ್ ವ್ಯವಸ್ಥೆ ಮಾಡಿ ಧೈರ್ಯ ತುಂಬಿದೆ ಎಂದು ತಿಳಿಸಿದರು.