ಉಡುಪಿ, ಜು. 15(DaijiworldNews/AA): ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಡಾ. ಕೀರ್ತನ್ ಉಪಾಧ್ಯಾಯ ಅವರ ಎಕ್ಸ್ ಖಾತೆಯಿಂದ ಮಾಡಿದ ಟ್ವೀಟ್ ವಿವಾದವನ್ನು ಸೃಷ್ಟಿಸಿದೆ. ಇದೀಗ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಡಾ. ಕೀರ್ತನ್ ತಿಳಿಸಿದ್ದಾರೆ.


ಜುಲೈ 13 ರಂದು, ಡಾ.ಕೀರ್ತನ್ ಅವರನ್ನು ಎಕ್ಸ್ ನಲ್ಲಿ ಒಬ್ಬರು, "ನೀವು ಈ ಪ್ರಪಂಚದಿಂದ ಒಂದು ವಿಷಯವನ್ನು ತೆಗೆದುಹಾಕಲು ಬಯಸಿದರೆ, ಅದು ಏನು?" ಎಂದು ಪ್ರಶ್ನಿಸಿದ್ದಾರೆ. ಆ ಪ್ರಶ್ನೆಗೆ ಡಾ. ಕೀರ್ತನ್ ಉಪಾಧ್ಯಾಯ ಅವರು "ಮುಸ್ಲಿಂ ಸಮುದಾಯ" ಎಂದು ಉತ್ತರಿಸಿದ್ದಾರೆ. ಆ ಉತ್ತರವೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದೀಗ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಡಾ ಕೀರ್ತನ್ ಉಪಾಧ್ಯಾಯ ವಿರುದ್ಧ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಳಕೆದಾರರು ರಾಜ್ಯ ಡಿಜಿಪಿಯನ್ನು 'ಎಕ್ಸ್' ನಲ್ಲಿ ಟ್ಯಾಗ್ ಮಾಡಿದ್ದು, ಇಂತಹ ವಿವಾದಾತ್ಮಕ ಟ್ವೀಟ್ ಮಾಡಿರುವ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ ಡಾ.ಕೀರ್ತನ್ ಅವರ ಎಕ್ಸ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಕ್ ಮಾಡಿದಾತ ಈ ರೀತಿಯ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಈ ಎಲ್ಲಾ ಘಟನೆಯ ಬಳಿಕ ಡಾ ಕೀರ್ತನ್ ಅವರು ಕೂಡ ಟ್ವೀಟ್ ಮಾಡಿದ್ದು, "ಕೆಲವು ತಿಂಗಳ ಹಿಂದೆ ನಾನು ಟ್ವಿಟರ್ ಬಳಸುವುದನ್ನು ನಿಲ್ಲಿಸಿದ್ದೆ, ಯಾವುದೋ ಅನಗತ್ಯ ಪೋಸ್ಟ್ ಮಾಡಲಾಗಿದೆ ಎಂದು ನನಗೆ ತಿಳಿಯಿತು. ಯಾರೋ ನನ್ನ ಖಾತೆಯನ್ನು ಬಳಸುತ್ತಿದ್ದಾರೆ, ನಾನು ನನ್ನ ಪಾಸ್ವರ್ಡ್ ಲಾಗಿನ್ ವಿವರಗಳನ್ನು ಮತ್ತು ಖಾತೆಗೆ ಸಂಬಂಧಿಸಿದ ಎಲ್ಲವನ್ನೂ ಬದಲಾಯಿಸಿದ್ದೇನೆ. ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ" ಎಂದು ಸ್ಪಷ್ಟ ಪಡಿಸಿದ್ದಾರೆ.