ಮೈಸೂರು, ನ 24: ಕಲಾನಗರಿ ಮೈಸೂರು ನಾಡುನುಡಿಯ ರಾಜವೈಭವದ ಜಾತ್ರೆಗೆ ಸಕಲ ಸಿದ್ಧತೆ ನಡೆಸಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಾಂಸ್ಕ್ರತಿಕ ರಾಜಧಾನಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಇಂದಿನಿಂದ ಮೂರು ದಿನಗಳ ಕಾಲ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕೆಂಪು-ಹಳದಿ ಬಣ್ಣದ ಬಾವುಟಗಳಿಂದ ಕಂಗೊಳಿಸುತ್ತಿದೆ. ಮೈಸೂರಿನ ರಸ್ತೆಯ ಅಕ್ಕಪಕ್ಕ ಕರುನಾಡ ಧ್ವಜಗಳ ಜೊತೆಗೆ ಹಿರಿಯ ಸಾಹಿತಿಗಳ, ಕವಿಗಳ ಭಾವಚಿತ್ರಗಳು ರಾರಾಜಿಸುತ್ತಿದೆ.
ಕನ್ನಡ ಸಮ್ಮೇಳನಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾ ಮಂಟಪದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ ಶೃಂಗಾರಗೊಂಡಿದೆ. ಪ್ರೊ. ಚಂದ್ರಶೇಖರ ಪಾಟೀಲ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ಪ್ರತಿನಿತ್ಯ ಒಂದೂವರೆ ಲಕ್ಷ ಜನ ಜನರು ಆಗಮಿಸುವ ನಿರೀಕ್ಷೆ ಇದೆ.
ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಂಜೆ 6 ರಿಂದ 10 ಗಂಟೆಯವರೆಗೆ ಒಟ್ಟು 7 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.