ಉಡುಪಿ, ಜು. 16(DaijiworldNews/AA): ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ನದಿಗಳು ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಇದರಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದರೊಂದಿಗೆ ರಸ್ತೆಗಳು ಮುಳುಗಡೆಯಾಗಿದೆ.















ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಪರಿಣಾಮ ಈ ನೀರು ರಸ್ತೆಗಳು ಮತ್ತು ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ರಸ್ತೆಮಾರ್ಗಗಳು ಪ್ರಯಾಣಿಕರಿಗೆ ಕಾಣಿಸದೇ ತೊಂದರೆಯುಂಟಾಗಿದೆ. ಸೀತಾ ನದಿಯ ನೀರಿನ ಮಟ್ಟವು ಹೆಚ್ಚಾಗಿ ಮಳೆ ನೀರು ರಸ್ತೆಗಳ ಮೇಲೆ ಹರಿಯತೊಡಗಿದೆ. ಹೀಗಾಗಿ ಹೆಬ್ರಿ-ಆಗುಂಬೆ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಉಡುಪಿಯಿಂದ ಶಿವಮೊಗ್ಗಕ್ಕೆ ಹೋಗುವ ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಸೂಚಿಸಲಾಗಿದೆ.
ಇನ್ನು ಉಪ್ಪೂರಿನ ಸರ್ಕಾರಿ ಹಿರಯ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದೆ. ಶಾಲೆಯ ಆಟದ ಮೈದಾನವು ಜಲಾವೃತಗೊಂಡಿದ್ದು, ಪುಸ್ತಕಗಳು, ದಾಖಲೆಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ಓದುವ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಆಡಳಿತ ಮಂಡಳಿಯು ಸ್ಥಳಾಂತರಿಸಿತು. ಮಳೆಗಾಲದ ಸಮಯದಲ್ಲಿ ನದಿ ಉಕ್ಕಿ ಹರಿಯುವುದರಿಂದ ಈ ಪ್ರದೇಶದಲ್ಲಿ ಯಾವಾಗಲೂ ಪ್ರವಾಹ ಉಂಟಾಗುತ್ತದೆ. ಈ ಭಾಗದ ವಸತಿ ಗೃಹಗಳಿಗೂ ಮಳೆ ನೀರು ನುಗ್ಗಿದ್ದು, ಈ ಭಾಗಕ್ಕೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬ್ರಹ್ಮಾವರದ ಉಪ್ಪೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರಶಾಂತ್ ಶೆಟ್ಟಿ ಅವರು, "ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದ ನದಿಗಳು ತುಂಬಿ ಹರಿಯುತ್ತಿವೆ. ಶಾಲಾ ಆವರಣ ನೀರಿನಿಂದ ಜಲಾವೃತಗೊಂಡಿದೆ. ಹೀಗೆ ಮಳೆ ಮುಂದುವರಿದರೆ ಶಾಲೆಯೊಳಕ್ಕೂ ನೀರು ನುಗ್ಗುವ ಸಾಧ್ಯತೆ ಇದೆ. ನಾವು ಓದುವ ಸಾಮಗ್ರಿಗಳು, ಕಂಪ್ಯೂಟರ್ಗಳು ಮತ್ತು ಪುಸ್ತಕಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಜಿಲ್ಲಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವುದರಿಂದ ಯಾವುದೇ ತೊಂದರೆಯುಂಟಾಗಿಲ್ಲ" ಎಂದು ತಿಳಿಸಿದ್ದಾರೆ.