ಕುಂದಾಪುರ, ಜು 17 (DaijiworldNews/MS): ಪತಿಯೋರ್ವ ತನ್ನ ಪತ್ನಿಯ ಮುಂದೆಯೇ ತುಂಬಿ ಹರಿಯುತ್ತಿದ್ದ ವಾರಾಹಿ ನದಿಗೆ ಹಾರಿ ನೀರಲ್ಲಿ ಕೊಚ್ಚಿ ಹೋದ ಘಟನೆ ಮಂಗಳವಾರ ಮಧ್ಯಾಹ್ನ ಕಂಡ್ಲೂರು ಎಂಬಲ್ಲಿ ನಡೆದಿದೆ.

ಪತಿ-ಪತ್ನಿ ಕಲಹ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಕಳುಹಿಸಿದ್ದು ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಪತ್ನಿ ಹಾಗೂ ಮನೆಮಂದಿ ಎದುರೇ ಪತಿ ಸೇತುವೆಯಿಂದ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಕಾಳಾವರ ಜನತಾ ಕಾಲನಿ ನಿವಾಸಿ ಹರೀಶ್ (44) ನದಿಗೆ ಹಾರಿದ್ದು, ಅವರ ಶೋಧ ಕಾರ್ಯ ರಾತ್ರಿಯವರೆಗೆ ನಡೆದಿದೆ.
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಹರೀಶ್ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ್ದು ಇತ್ತಿಚಿನ ದಿನಗಳಲ್ಲಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಜು.16ರಂದು ಹರೀಶ್ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪತ್ನಿ ದೂರು ಅರ್ಜಿ ಕೊಟ್ಟಿದ್ದರಿಂದ ಪೊಲೀಸರು ಹರೀಶ್ ನನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಹರೀಶ್ ಠಾಣೆಗೆ ಬಂದಿದ್ದು ದಂಪತಿಗೆ ಪೊಲೀಸರು ಬುದ್ದಿ ಮಾತನ್ನು ಹೇಳಿ ಮುಂದಕ್ಕೆ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತೆ ತಿಳುವಳಿಕೆ ಹೇಳಿ ಕಳುಹಿಸಿಕೊಟ್ಟಿದ್ದರು.
ಹಿಂದಿರುಗಿತ್ತಿದ್ದ ವೇಳೆ ಕೈಯಲ್ಲಿದ್ದ ತಾಯತ ನದಿಗೆ ಎಸೆಯುವುದಾಗಿ ಹೇಳಿ ಪ್ರಯಾಣಿಸುತ್ತಿದ್ದ ರಿಕ್ಷಾ ನಿಲ್ಲಿಸುವಂತೆ ಹೇಳಿ ನದಿಗೆ ಹಾರಿದ್ದಾರೆ. ಅಗ್ನಿಶಾಮಕ ದಳ, ವಿಪತ್ತು ನಿರ್ವಹಣ ದಳ , ಸ್ಥಳೀಯರು ದೋಣಿ ಬಳಸಿ ನಡೆಸಿದ್ದರೂ ಪತ್ತೆಯಾಗಿಲ್ಲ.