ಮಂಗಳೂರು, ಜು. 17(DaijiworldNews/AA): ಇಂದು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.







ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸೋಮಣ್ಣ ಅವರು, ಆಹಾರ ವ್ಯವಸ್ಥೆ, ಶಾಚಾಲಯ, ಪ್ಲಾಟ್ ಫಾರಂಗಳ ಪರಿಶೀಲನೆ ನಡೆಸಿದರು. ಜೊತೆಗೆ ಸ್ವಚ್ಛತೆ ಬಗ್ಗೆ ವಿಶೇಷ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ನಗರದ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಯಾವ ರೀತಿಯಲ್ಲಿ ಇದೆಯೋ ಅದಕ್ಕಿಂತ ವಿಭಿನ್ನವಾಗಿ ನಮ್ಮ ರೈಲ್ವೇ ಇಲಾಖೆಯಲ್ಲಿಯೂ ಕೂಡ ವಿಪತ್ತು ನಿರ್ವಾಹಣಾ ತಂಡವನ್ನು ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ವಾರ್ ರೂಮ್ ಗಳನ್ನು ಮಾಡಿದ್ದೇವೆ. ಪ್ರತಿಯೊಂದು ಕಡೆಯಲ್ಲಿಯೂ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಬಾರಿ ಮಳೆ ಹೆಚ್ಚಾಗಿದ್ದು, ಜಿಲ್ಲಾಧಿಕಾರಿಗಳಿಗೆ ನಮ್ಮ ಇಲಾಖೆಯವರು ಕೈ ಜೋಡಿಸಲಿದ್ದಾರೆ ಎಂದರು.
ನನಗೆ ಗೊತ್ತಿರುವ ಹಳೆಯ ಸಿದ್ದರಾಮಯ್ಯ ವರು ಕಳೆದುಹೋಗಿದ್ದಾರೆ. ನಾನು ಅವರೊಂದಿಗೆ ಮಂತ್ರಿಯಾಗಿ, ಎಂಎಲ್ ಎ ಆಗಿ ಕೆಲಸ ನಿರ್ವಹಿಸಿದ್ದೇನೆ. ಇಂದು ಇರುವ ಸಿದ್ದರಾಮಯ್ಯ ಅವರು ನನಗೆ ಒಂದು ರೀತಿಯಲ್ಲಿ ಅನುಮಾನ ಆಗಿದ್ದಾರೆ. ವಾಸ್ತವಾಂಶ ಏನೆಂದರೆ ಯಾರೂ ಕೂಡ ಏನನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಇದನ್ನು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ತಿಳಿಸಿದರೆ ಅವರು ಹಳೆಯ ಸಿದ್ದರಾಮಯ್ಯ ಅವರು ಆಗುತ್ತಾರೆ ಎಂದು ತಿಳಿಸಿದರು.
ರೈಲ್ವೆ ನಿಲ್ದಾಣ ಭೇಟಿ ಬಳಿಕ ದ. ಕ ಜಿಲ್ಲಾ ಪಂಚಾಯತ್ ನಲ್ಲಿ ವಿ. ಸೋಮಣ್ಣ ಅವರು ವಿಶೇಷ ಸಭೆ ನಡೆಸಲಿದ್ದಾರೆ. ದಕ್ಷಿಣ ಕನ್ನಡದ ಇತಿಹಾಸದಲ್ಲೇ ಮೊದಲ ಬಾರಿಗೆ ವಿ ಸೋಮಣ್ಣ ಅವರು ಮಂಗಳೂರಿನಲ್ಲಿ ರೈಲ್ವೆ ಇಲಾಖೆಯ ಸಭೆ ನಡೆಸಲಿದ್ದಾರೆ.
ಸಚಿವ ವಿ ಸೊಮ್ಮಣ್ಣ ಅವರಿಗೆ ದ. ಕ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ಹರೀಶ್ ಪೂಂಜ ಸಾಥ್ ನೀಡಿದರು.