ಉಡುಪಿ, ಮೇ16(Daijiworld News/SS): ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಪರ ಊರಿನ ಯಾತ್ರಾತ್ರಿಗಳು ಮಾತ್ರ ಈ ಶೌಚಾಲಯ ಉಪಯೋಗಿಸಬೇಕು ಎಂದು ಶ್ರೀಕೃಷ್ಣಮಠದ ಯಾತ್ರಿಕರ ಶೌಚಾಲಯದ ಎದುರು ಫಲಕ ಹಾಕಲಾಗಿದೆ.
ಜಿಲ್ಲೆಯ ನಗರ ಹಾಗೂ 8 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯ ಬರಿದಾಗಿರುವುದರಿಂದ ನೀರಿಗೆ ಸಮಸ್ಯೆ ಉಂಟಾಗಿದೆ. ಪರಿಣಾಮ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವ ಸಾವಿರಾರು ಪ್ರವಾಸಿಗರಿಗೆ ಸ್ನಾನ ಮಾಡಲು ನೀರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಶ್ರೀಕೃಷ್ಣಮಠದ ಪರಿಸರದಲ್ಲಿನ ಯಾತ್ರಾತ್ರಿಗಳ ಶೌಚಾಲಯಗಳ ಮುಂದೆ ಫಲಕ ಹಾಕಲಾಗಿದೆ.
ಇಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿರುವ ಯಾತ್ರಾತ್ರಿಗಳ ಶೌಚಗೃಹಕ್ಕೆ ಸ್ಥಳೀಯರ ಪ್ರವೇಶ ನಿಷೇಧಿಸಲಾಗಿದೆ. ಶ್ರೀಕೃಷ್ಣಮಠಕ್ಕೆ ಭೇಟಿನೀಡುವ ಪ್ರವಾಸಿಗರು ಮಾತ್ರ ಶೌಚಾಲಯ ಬಳಸಬೇಕು ಎಂದು ಬೋರ್ಡ್ ಹಾಕಲಾಗಿದೆ.
ಮಠಕ್ಕೆ ಬರುವ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸ್ಥಳೀಯರಿಗೆ ಅವಕಾಶ ನೀಡುತ್ತಿಲ್ಲ. ಸ್ನಾನಕ್ಕೆ ನೀರಿಲ್ಲ. ಮಲ–ಮೂತ್ರ ವಿಸರ್ಜಿಸಲು ನೀರು ಕೊಡಲಾಗುತ್ತಿದೆ. ಶೌಚಾಲಯ ಬಳಕೆಗೆ ಹಣ ಪಡೆಯುವುದಿಲ್ಲ. ನಿತ್ಯ 500ಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೆಳಿಗ್ಗೆ 2 ಟ್ಯಾಂಕರ್ ನೀರನ್ನು ಸಂಪ್ ಹಾಗೂ ಸಿಂಟೆಕ್ಸ್ಗೆ ಭರ್ತಿ ಮಾಡುತ್ತೇವೆ. ಸಂಜೆಯಷ್ಟರಲ್ಲಿ ಖಾಲಿಯಾಗುತ್ತದೆ. ಮಳೆ ಬರುವವರೆಗೂ ಸಮಸ್ಯೆ ಇರಲಿದೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.