ಕುಂದಾಪುರ,ಮೇ 17(Daijiworld News/MSP): ಕರಾವಳಿಯಾದ್ಯಂತ ಮರಳುಗಾರಿಕೆ ನಿಷೇಧವಾಗಿದ್ದರೂ ಕಂಡ್ಲೂರಿನಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರ ಕ್ರಮಕ್ಕೆ ಅಕ್ರಮ ಮರಳುದಂಧೆಕೋರರು ಠಾಣೆಗೆ ಕಲ್ಲೆಸೆದು ದಾಂಧಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಠಾಣೆಗೆ ಹಾನಿ ಮಾಡಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ನಿಯೋಜನೆಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಬಂಧನಕ್ಕೊಳಗಾದವರನ್ನು ಬೆಟ್ಟಿ ಶಾಹೀದ್, ಜಾಕೀರ್ ಹುಸೇನ್, ತಬ್ರೀಜ್ ಹಾಗೂ ಶಾಕೀರ್ ಎಂದು ಗುರುತಿಸಲಾಗಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕರಾವಳಿಯಾದ್ಯಂತ ಮರಳುಗಾರಿಕೆಗೆ ನಿಷೇಧ ಹೇರಲಾಗಿದೆ. ಆದರೆ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಗುರುವಾರವೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಕಂಡ್ಲೂರು ಠಾಣೆಯ ಪೊಲೀಸರು ನಿಗಾ ವಹಿಸಿದ್ದರು. ಗುರುವಾರ ಸಂಜೆಗತ್ತಲೆಯಲ್ಲಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಧರ ನಾಯ್ಕ್ ನೇತೃತ್ವದಲ್ಲಿ ಓಮ್ನಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದು ದಂಧೆಕೋರರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿ ಹಾಗೂ ವಾಹನವನ್ನು ಬಿಡುಗಡೆಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಎಸೈ ಶ್ರೀಧರ ನಾಯ್ಕ್ ಪ್ರಕರಣ ದಾಖಲಿಸುವುದಾಗಿಯೂ ಆರೋಪಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದರು. ಇದರಿಂದ ಆಕ್ರೋಶಿತಗೊಂಡ ದಂಧೆಕೋರರರಲ್ಲಿ ಕೆಲವು ಕಿಡಿಗೇಡಿಗಳು ಠಾಣೆಯ ಛಾವಣಿಯ ಮೇಲೆ ಕಲ್ಲೆಸೆದಿದ್ದಾರೆ. ಈ ಸಂದರ್ಭ ಪೊಲೀಸರು ಠಾಣೆಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಯತ್ನಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದು ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರು ಓಡಿಹೋಗಿದ್ದಾರೆ.
ರಾತ್ರಿ ವೇಳೆಯಲ್ಲಿ ಮತ್ತಷ್ಟು ದಾಳಿಯ ಸಾಧ್ಯತೆ ಇರುವುದರಿಂದ ಮೀಸಲು ಪಡೆಯ ಸಿಬ್ಬಂದಿಗಳನ್ನು ಠಾಣೆಯ ಸುತ್ತ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಆಗಮಿಸಿ ಪರಿಶೀಲಿಸಿದ್ದಾರೆ. ಠಾಣೆಗೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಎರಡು ವರ್ಷಗಳ ಹಿಂದೆ ಅಂದರೆ ಎಪ್ರಿಲ್ 2, 2017ರ ರಾತ್ರಿ ಕಂಡ್ಲೂರಿನಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಹಾಗೂ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಮತ್ತು ಕಂದಾಯ ಇಲಾಖಾ ಸಿಬ್ಬಂದಿ ಕಾಂತರಾಜ್ ಎಂಬವರ ಮೇಲೆಯೂ ಇದೇ ಅಕ್ರಮ ದಂಧೆಕೋರರ ತಂಡ ದಾಳಿ ನಡೆಸಿ ಹಲ್ಲೆ ಮಾಡಿತ್ತು. ಘಟನೆಗೆ ಸಂಭಂಧಿಸಿ 27 ಜನರನ್ನು ಬಂಧಿಸಲಾಗಿತ್ತು ಮತ್ತು ಒಟ್ಟು 50 ಜನರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿತ್ತು. ಆಗ ಸ್ಥಳೀಯ ಕೆಲವು ರಾಜಕೀಯ ನಾಯಕರೂ ಅಕ್ರಮ ದಂಧೆಕೋರರ ಬೆಂಬಲಕ್ಕೆ ನಿಂತಿದ್ದರು. ಇದೀಗ ಸರಿಯಾಗಿ ಎರಡು ವರ್ಷಗಳ ಬಳಿಕ ಮತ್ತೆ ಪೊಲೀಸ್ ಇಲಾಖಾ ಕಚೇರಿಯ ಮೇಲೆ ಕಲ್ಲೆಸೆದು ದಾಂಧಲೆ ನಡೆಸಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಸಿದೆ. ಬಂಧಿತರ ವಿರುದ್ದ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.