ಮಂಗಳೂರು, ಮೇ 17(Daijiworld News/MSP): ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಭೀಕರ ಹತ್ಯೆ ಪ್ರಕರಣದ ಎರಡನೇ ಆರೋಪಿ ವಿಕ್ಟೋರಿಯಾ ಮಥಾಯಿಸ್ ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 29ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ (36) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಸಂಪೂರ್ಣ ಗುಣಮುಖವಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ವಿಚಾರಣೆ ವೇಳೆ ನೀಡಿದ ಆಧಾರದಲ್ಲಿ ಆತನಿಂದ ಕೆಲವೊಂದು ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲು ಬಾಕಿ ಇದೆ.
ಇನ್ನು ಶ್ರೀಮತಿ ಶೆಟ್ಟಿಯ ಪಾದದ ಭಾಗಗಳನ್ನು ವಿಧಿ ವಿಜ್ಞಾನ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಫೂರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ. ಈ ಪಾದಗಳು ಶ್ರೀಮತಿ ಶೆಟ್ಟಿ ಅವರದ್ದು ಹೌದೋ ಅಲ್ಲವೇ ಎಂಬುವುದನ್ನು ಖಚಿತ ಪಡಿಸಲು ಅವುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಂಧನ ಸಂದರ್ಭ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ ಖಾಸಗಿ ಆಸ್ಪತ್ರೆ ಯಲ್ಲಿ ಚೇತರಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಬಿಡುಗಡೆ ಹೊಂದುವ ಸಾಧ್ಯತೆ ಇದೆ.
ಈ ಪ್ರಕರಣದ ತನಿಖೆಯ ಸಂಪೂರ್ಣ ಹೊಣೆಯನ್ನು ಕದ್ರಿ ಠಾಣಾ ಪೊಲೀಸರಿಗೆ ವಹಿಸಲಾಗಿದೆ. ಕದ್ರಿ ಪೊಲೀಸರೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.