ಕಡಬ,ಮೇ 17(Daijiworld News/MSP): ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ನ್ಯಾಯ ಬೆಲೆ ಅಂಗಡಿಯಲ್ಲಿ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ವಿತರಿಸಲಾದ ಅಕ್ಕಿಯಲ್ಲಿ ಸತ್ತ ಇಲಿ ಕಂಡುಬಂದಿದ್ದು, ಈ ಕುರಿತು ಆಹಾರ ನಿರೀಕ್ಷಕರಿಗೆ ದೂರು ನೀಡಲಾಗಿದೆ.
ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿಯಾಗಿರುವ ಬಿಪಿಎಲ್ ಪಡಿತರ ಕಾರ್ಡುದಾರರೋರ್ವರು ಮೇ 16ರ ಗುರುವಾರದಂದು ಕಡಬದ ನ್ಯಾಯ ಬೆಲೆ ಅಂಗಡಿಯಿಂದ 35 ಕೆ.ಜಿ. ಅಕ್ಕಿ ಕೊಂಡೊಯ್ದಿದ್ದರು. ಆದರೆ ಅಕ್ಕಿಯ ಗುಣಮಟ್ಟ ತೀರ ಕಳಪೆಯಾಗಿದ್ದ ಕಾರಣಕ್ಕೆ ಅದನ್ನು ಬಿಸಿಲಿನಲ್ಲಿ ಒಣಹಾಕಲು ಗೋಣಿಯಿಂದ ತೆಗೆದ ಹರಡಿದಾಗ ಅಕ್ಕಿಯ ನಡುವೆ ಸತ್ತ ಇಲಿ ಕಂಡುಬಂದಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ನಮ್ಮ ಮುಂದೆಯೇ ಅಂಗಡಿ ಸಿಬ್ಬಂದಿ ಹೊಸ ಗೋಣಿ ತೆರೆದು ಅಕ್ಕಿ ತೆಗೆದುಕೊಟ್ಟಿದ್ದಾರೆ. ನ್ಯಾಯಬೆಲೆ ಅಂಗಡಿಗೆ ಸರಬರಾಜಾಗುವಾಗಲೇ ಗೋಣಿಯೊಳಗೆ ಸತ್ತ ಇಲಿ ಇದ್ದಿರಬೇಕು. ಅದನ್ನು ತೂಗಿ ಕೊಡುವ ಸಿಬ್ಬಂದಿಗೂ ಇದು ಗಮನಕ್ಕೆ ಬಂದಿಲ್ಲ. ಅಂಗಡಿಯಲ್ಲೂ ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಕಾರ್ಡುದಾರ ತಿಳಿಸಿದ್ದಾರೆ.
ಈ ಕುರಿತು ಪುತ್ತೂರು ಆಹಾರ ನಿರೀಕ್ಷಕರಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ಸಹಕಾರಿ ಸಂಘದ ಅಧ್ಯಕ್ಷ್ಯ ರಮೇಶ್ ಕಲ್ಪುರೆ ಪ್ರತಿಕ್ರಿಯೆ ನೀಡಿದ್ದಾರೆ.