ಮಂಗಳೂರು, ಮೇ 17(Daijiworld News/MSP): ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಗೋಡ್ಸೆ ಹಾಗೂ ಕಸಬ್ ಗೆ ಹೋಲಿಕೆ ಮಾಡಿ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು ಬಳಿಕ ಅದು ವಿವಾದ ರೂಪ ಪಡೆಯುತ್ತಿದ್ದಂತೆ ತಮ್ಮ ಖಾತೆಯಿಂದ ಟ್ವೀಟ್ ನ್ನು ಅಳಿಸಿ ತಮ್ಮ ಟ್ವೀಟ್ ಗೆ ಕ್ಷಮೆಯಾಚಿಸಿದ್ದಾರೆ.
" ನಾಥುರಾಂ ಗೋಡ್ಸೆ ಒಬ್ಬರನ್ನು ಕೊಂದರು, ಕಸಬ್ ಕೊಂದಿದ್ದು 72 ಜನರನ್ನು, ರಾಜೀವ್ ಗಾಂಧಿ 17,000 ಜನರನ್ನು. ಇವರಲ್ಲಿ ಯಾರು ಹೆಚ್ಚು ಕ್ರೂರರೆಂದು ನೀವೇ ನಿರ್ಣಯಿಸಿ’ ಎಂದು ನಳಿನ್ ಕುಮಾರ್ ಕಟೀಲ್ ಗುರುವಾರ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಕಟೀಲ್ ತಾವು ಮಾಡಿದ್ದ ಟ್ವೀಟ್ ಅಳಿಸಿ ಹಾಕಿದ್ದಾರೆ.
ಇಂದಿರಾ ಗಾಂಧಿ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆಯಲ್ಲಿ ಸಾವಿರಾರು ಜನರು ಸಾವಿಗೀಡಾಗಿದ್ದರು. ಈ ಘಟನೆಯನ್ನು ಲೋಕಸಭೆಯ ಚುನಾವಣೆಯ ವೇಳೆ ಭಾರತೀಯ ಜನತಾ ಪಕ್ಷವೂ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ.
ಅವರ ಟ್ವೀಟ್ ವಿವಾದದ ರೂಪ ಪಡೆಯುತ್ತಿದ್ದಂತೆ ಟ್ವಿಟರ್ ನಲ್ಲೇ ನಳಿನ್ ಕ್ಷಮೆಯಾಚಿಸಿದ್ದಾರೆ. " ನನ್ನ ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ" ಎಂದು ಬರೆದುಕೊಂಡಿದ್ದಾರೆ.