ಉಡುಪಿ,ಮೇ 17(Daijiworld News/MSP): ಉಡುಪಿಯಾದ್ಯಂತ ನೀರಿಗೆ ಹಾಹಾಕಾರ ಉಂಟಾಗಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಟ ಎದುರಾಗಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿರುವ ಸುಭದ್ರೆ ಆನೆಗೆ ಪ್ರತಿನಿತ್ಯ ಸ್ನಾನ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಆಗಿತ್ತು. ಇದೀಗ ಸಾಮಾಜಿಕ ಕಾರ್ಯಕರ್ತರು ಆನೆಗೆ ಅಗತ್ಯ ನೀರಿನ ವ್ಯವಸ್ಥೆ ಮಾಡಿಸಿ ಮೂಕ ಪ್ರಾಣಿಗೆ ಸ್ಪಂದಿಸಿದ್ದಾರೆ.
ಉಡುಪಿಯ ಶ್ರೀಕೃಷ್ಣಮಠದ 28 ವರ್ಷದ ಆನೆ ಸುಭದ್ರೆಗೆ ನಿತ್ಯವು ಸ್ನಾನವು ಅಗತ್ಯವಾಗಿ ಆಗಬೇಕಾಗಿದೆ. ಆನೆ ಸುಭದ್ರೆಯ ಸ್ನಾನ ಕಾರ್ಯಕ್ಕೆ ಸುಮಾರು 2 ಸಾವಿರ ಲೀಟರಿನಷ್ಟು ನೀರು ಹಾಗೂ ಕುಡಿಯಲು ಸುಮಾರು 300 ಲೀಟರ್ ನೀರು ಬೇಕಾಗುತ್ತದೆ ,ಆದ್ರೆ ಕಳೆದ ಹಲವಾರು ದಿನಗಳಿಂದ ಉಡುಪಿಯಾದ್ಯಂತ ನೀರಿನ ಸಮಸ್ಯೆ ಉದ್ಭವವಾಗಿದ್ದು ಮಠದ ಆನೆಗೂ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೆಸರಿ ತುಂಬಿ ಸ್ನಾನವಿಲ್ಲದೆ ಸುಭದ್ರೆಗೆ ಕಿರಿಕಿರಿ ಅನುಭವಿಸುತ್ತಿದ್ದಳು.
ಈ ಹಿನ್ನಲೆಯಲ್ಲಿ ಕಳೆದ ವಾರಗಳಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್, ಉಡುಪಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಇರುವ ಜನವಸತಿ ಬಡಾವಣೆಗಳಲ್ಲಿ ಉಚಿತ ನೀರು ವಿತರಿಸುತ್ತಿದೆ. ಮಠದ ಆನೆಗೂ ನೀರು ಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಸ್ಪಂದಿಸಿದೆ. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರನಾಥ ಮೆಸ್ತ್, ರಾಜು ಕಾಪು ಹಾಗೂ ಬಾಲಗಂಗಾಧರ್ ರಾವ್ ಶ್ರೀಕೃಷ್ಣಮಠದ ಆನೆ ಸುಭದ್ರೆಗೆ ಬೆಳಗ್ಗಿನ ಜಾವದ ಸ್ನಾನ ಕಾರ್ಯಕೆಂದು 5 ಸಾವಿರ ಲೀಟರ್ ತಂದು ಒದಗಿಸುತ್ತಿದ್ದಾರೆ.
ಹಲವು ದಿನಗಳಿಂದ ಸ್ನಾನವಿಲ್ಲದೆ ಕಳೆದ ಸುಭದ್ರೆಗೆ ತಣ್ಣೀರು ಮೈಮೇಲೆ ಬೀಳುತ್ತಿದ್ದಂತೆ ಸೆಕೆಯಿಂದ ಕಂಗೆಟ್ಟ ಸುಭದ್ರೆ ನೆಲದಲ್ಲಿ ಹಾಯಾಗಿ ಮಲಗಿ ಖುಷಿಪಟ್ಟಳು