ಮಂಗಳೂರು, ಮೇ17(Daijiworld News/SS): ಮತ ಎಣಿಕೆ ದಿನಾಂಕ ಹತ್ತಿರವಾಗುತ್ತಿದ್ದು, ಸುರತ್ಕಲ್ನ ಎನ್ಐಟಿಕೆ ಮತ ಎಣಿಕೆ ಕೇಂದ್ರಕ್ಕೆ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಲೋಕಸಭಾ ಮತ ಎಣಿಕೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮತ್ತು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಅವರಿಗೂ ಬೆಂಗಳೂರಿನಲ್ಲಿ ವಿಶೇಷ ತರಬೇತಿ ನೀಡಲಾಗಿದೆ.
ಸುರತ್ಕಲ್ನ ಎನ್ಐಟಿಕೆ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದರೆ, ಉಡುಪಿ ನಗರದ ಬ್ರಹ್ಮಗಿರಿ ಬಳಿಯ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ ಮತ ಎಣಿಕೆ ಕೇಂದ್ರದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆದು ಸುಮಾರು ಒಂದು ತಿಂಗಳು ಕಳೆದಿದೆ. ಇದೀಗ ಮತ ಎಣಿಕೆಗೆ ಸಿದ್ಧತೆ ಆರಂಭವಾಗಿದೆ. ಮಾತ್ರವಲ್ಲ, ಮತ ಎಣಿಕೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತರಬೇತಿ ಕೂಡ ನಡೆದಿದೆ. ರಾಜ್ಯ ಮಟ್ಟದ ತರಬೇತುದಾರರು ಆಗಮಿಸಿ ತರಬೇತಿ ನೀಡಿದ್ದಾರೆ. ಈ ಬಾರಿ ಹೆಚ್ಚುವರಿ ವಿವಿಪ್ಯಾಟ್-ಇವಿಎಂ ಮತ ತಾಳೆ ನೋಡ ಬೇಕಾಗಿರುವುದರಿಂದ ತರಬೇತಿಯಲ್ಲಿ ಆ ಬಗ್ಗೆ ಗಮನ ಹರಿಸಲಾಗಿದೆ.
ನಗರದ ಹೊರ ವಲಯದಲ್ಲಿರುವ ಸುರತ್ಕಲ್ ಎನ್ಐಟಿಕೆ ಆವರಣದಲ್ಲಿ ಇದೇ ಮೊದಲ ಬಾರಿಗೆ ದ.ಕ. ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಈ ಹಿಂದೆ 2009ರ ಮತ ಎಣಿಕೆ ನಗರದ ಕೆನರಾ ಕಾಲೇಜು ಆವರಣದಲ್ಲಿ ನಡೆದಿತ್ತು.