ಕುಂದಾಪುರ, ಮೇ17(Daijiworld News/SS): ಇಲ್ಲಿನ ತೆಕ್ಕಟ್ಟೆ ಸಮೀಪದ ಕೊಮೆ ಎಂಬಲ್ಲಿ ಆಟವಾಡಲೆಂದು ಸಮುದ್ರಕ್ಕೆ ಇಳಿದ ಓರ್ವ ನೀರುಪಾಲಾದ ಘಟನೆ ನಡೆದಿದೆ.
ಮೃತರಾದವರು ಬೆಂಗಳೂರು ಮೂಲದ ಪ್ರವಾಸಿ ಎಂದು ತಿಳಿದು ಬಂದಿದೆ.
ನೀರಿನಲ್ಲಿ ಆಟವಾಡಲೆಂದು ಸುಮಾರು 15 ಜನರಿದ್ದ ತಂಡ ಸಮುದ್ರಕ್ಕಿಳಿದಿತ್ತು. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ಸ್ಥಳೀಯರು ನೀರಿಗಿಳಿಯದಂತೆ ಎಚ್ಚರಿಸಿದ್ದರು. ಆದರೆ ಅದನ್ನು ಲೆಕ್ಕಿಸದೆ ಈ ತಂಡ ನೀರಿಗೆ ಇಳಿದು ಮೋಜು ಮಾಡಿತ್ತು ಎಂದು ತಿಳಿದುಬಂದಿದೆ.
ಈ ವೇಳೆ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ನಡೆಸಿದರೂ ಕೂಡ ನೀರಿನ ಅಬ್ಬರ ಜಾಸ್ತಿ ಇದ್ದ ಪರಿಣಾಮ ಎಲ್ಲರನ್ನು ಬದುಕಿಸಲು ಸಾಧ್ಯವಾಗಿಲ್ಲ. ಸ್ಥಳೀಯರ ರಕ್ಷಣಾ ಕಾರ್ಯದ ಮೂಲಕ ಇಬ್ಬರನ್ನು ರಕ್ಷಿಸಿದ್ದು ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರಾದ ಮಹಾಬಲ ಬಂಗೇರ, ಸಂತೋಷ್, ಗಣೇಶ ಪೂಜಾರಿ, ನಾಗರಾಜ್, ಸಂದೀಪ್, ಸಂಪತ್ ಮತ್ತು ರಾಘವೇಂದ್ರ ಅವರಿದ್ದ ತಂಡ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ ಎನ್ನಲಾಗಿದೆ.