ಬೆಳಗಾವಿ, ನ 24: ಅರಣ್ಯ ಇಲಾಖೆ ನಿರ್ಮಿಸಿದ ಜೀವ ವೈವಿದ್ಯ ಉದ್ಯಾನವನ ಉದ್ಘಾಟನೆ ಸಂದರ್ಭದಲ್ಲಿ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ.
ಮಚ್ಛೆ ಗ್ರಾಮ ಬಳಿಯ ವಿಟಿಯು ಪಕ್ಕದಲ್ಲಿ ಅರಣ್ಯ ಇಲಾಖೆ ಕಾರ್ಯಕ್ರಮವನ್ನು ಅಯೋಜಿಸಿದ್ದು, ಅರಣ್ಯ ಸಚಿವ ರಮಾನಾಥ ರೈ ಆಗಮಿಸಿದ್ದರು. ರೈ ಮೇಲೆ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ನಡೆಸಿ ಸಚಿವರ ಮುಸುಡಿಗೆ ಕಚ್ಚಿದ್ದು, ಉದ್ಘಾಟನೆ ನಂತರ ಭಾಷಣ ಮಾಡಬೇಕಿದ್ದ ಅರಣ್ಯ ಸಚಿವ ರಮಾನಾಥ ರೈ ಜೇನು ದಾಳಿ ನಡೆಸಿದ ಪರಿಣಾಮ ಮಾತನಾಡದೆ ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ನಡೆದಿದೆ.
ಅರಣ್ಯ ಸಚಿವರನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಚಿವರ ಸುತ್ತ ಧಾವಿಸಿ ಬಂದರೂ ಜೇನು ಹುಳುಗಳು ಸಚಿವರಿಗೆ ಕುಟುಕಿ ಹೋಗಿವೆ.
ಕಾರ್ಯಕ್ರಮ ಆರಂಭವಾದ ನಂತರ ಒಂದೊಂದಾಗಿ ಬಂದ ಜೇನು ದಾಳಿ ನಡೆಸಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಚ್ಚೆ ಶಾಲೆಯ ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮಕ್ಕೆ ಬಂದಿದ್ದು, ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಈಡೀ ಉದ್ಯಾನವನ ಓಡಾಡಬೇಕಾದ ಅನಿವಾರ್ಯ ಸ್ಥಿತಿ ಉಂಟಾಯಿತು.
ಜೇನು ನೊಣಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮೈಕ್ ವ್ಯವಸ್ಥೆ ಮಾಡುತ್ತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.