ಮಂಗಳೂರು, ಮೇ 18 (Daijiworld News/MSP): ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ರೌಡಿಶೀಟರ್ ಗೌರೀಶ್ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಇತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅಲ್ಲಿ ರೌಡಿಶೀಟರ್ ಗೌರೀಶ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಗರ ಠಾಣೆಗಳಲ್ಲಿ 3 ಕೊಲೆ ಸೇರಿದಂತೆ 6 ಪ್ರಕರಣಗಳ ಆರೋಪಿ ನಟೋರಿಯಸ್ ರೌಡಿ ಗೌರೀಶ್ಗೆ ಪೊಲೀಸರು ಶೋಧ ನಡೆಸುತ್ತಿದ್ದರು. ಈತ ಇತ್ತೀಚೆಗೆ ಬರ್ಕೆ ಠಾಣೆಯಲ್ಲಿ ನಡೆದ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿದ್ದಾನೆ. ಈತ ನಗರದಲ್ಲಿ ಸುತ್ತಾಡುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು. ಈ ಹಿನ್ನಲೆಯಲ್ಲಿ ಮೇ 9ರಂದು ರಾತ್ರಿ ಆರೋಪಿ ಜಪ್ಪಿನಮೊಗರು ಕಡೆ ಹೋಗುತ್ತಿದ್ದಾಗ ಪ್ರೆಸಿಡೆನ್ಸಿ ಸ್ಕೂಲ್ ಬಳಿ ಅಡ್ಡಗಟ್ಟಿದ ಪೊಲೀಸರು ಆತನ ಬಂಧಿಸಲು ಯತ್ನಿಸಿದ್ದಾರೆ.
ಈ ಸಂದರ್ಭ ಪೊಲೀಸ್ ಕಾನ್ ಸ್ಟೇಬಲ್ ಶೀನಪ್ಪ ಎಂಬುವವರ ಮೇಲೆ ರೌಡಿ ಗೌರೀಶ್ ಏಕಾಏಕಿ ದಾಳಿ ಮಾಡಿ, ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾನೆ. ಅಪಾಯದ ಮುನ್ಸೂಚನೆ ಅರಿತ ಸಿಸಿಬಿ ಎಸ್ಐ ಕಬ್ಬಳ್ ರಾಜ್, ರೌಡಿಶೀಟರ್ ಗೌರೀಶ್ ಕಾಲಿಗೆ ಶೂಟೌಟ್ ಮಾಡಿದ್ದಾರೆ. ಬಳಿಕ ಗುಂಡೇಟಿನಿಂದ ಕಾಲಿಗೆ ಗಾಯಗೊಂಡಿದ್ದ ಗೌರೀಶನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎಂಟು ದಿನಗಳಿಂದ ಆತ ಚಿಕಿತ್ಸೆ ಪಡೆಯುತ್ತಾ ಆಸ್ಪತ್ರೆಯಲ್ಲಿದ್ದ.
ಮೇ.18 ರ ಶುಕ್ರವಾರ ರಾತ್ರಿ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರೌಡಿಶೀಟರ್ ಗೌರೀಶ್ ಚೂರಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದಾಗ ಹೆಡ್ಕಾನ್ಸ್ಟೆಬಲ್ ಶೀನಪ್ಪ ಗಾಯಗೊಂಡಿದ್ದರು. ಅವರು ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದಾರೆ