ಮಂಗಳೂರು, ಮೇ 18(Daijiworld News/MSP): ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುಣಮುಖನಾಗಿ ಮೇ 16 ಶನಿವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆತನನ್ನು ವಶಕ್ಕೆ ಪಡೆದ ಕದ್ರಿ ಪೊಲೀಸರು ಶನಿವಾರ ಸ್ಥಳ ಮಹಜರು ನಡೆಸಿದರು.
ಆರೋಪಿಯು ಶ್ರೀಮತಿ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯ ವೆಲೆನ್ಸಿಯಾದ ಸೂಟರ್ಪೇಟೆ 8ನೇ ಅಡ್ಡ ರಸ್ತೆಯಲ್ಲಿ ತನ್ನ ಬಾಡಿಗೆ ನಿವಾಸ, ಹಾಗೂ ಶವವನ್ನು ಬರ್ಬರವಾಗಿ ಕತ್ತರಿಸಿ ನಗರದ ಮೂರು ದಿಕ್ಕುಗಳಲ್ಲಿ ಎಸೆದ ಸ್ಥಳಗಳಾದ ನಂದಿಗುಡ್ಡೆ , ಕದ್ರಿ ಪಾರ್ಕ್ ಹಿಂಬಾಗ, ಹಾಗೂ ಶ್ರೀಮತಿ ಶೆಟ್ಟಿಯ ದ್ವಿಚಕ್ರ ವಾಹನವಿರಿಸಿದ್ದ ನಾಗುರಿ ಬಳಿ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ತನ್ನ ಪೈಶಾಚಿಕ ಕೃತ್ಯದ ಬಳಿಕ ಪಶ್ಚತ್ತಾಪದ ಲವಲೇಶವೂ ಇಲ್ಲದೆ ಕಂಡುಬಂದ ಜೋನಸ್ ಜೂಲಿನ್ ಸ್ಯಾಮ್ಸನ್ (36) ಶವವನ್ನು ತುಂಡರಿಸಿದ ರೀತಿ , ಬಳಸಿದ ಆಯುಧ, ಛಿದ್ರ ದೇಹದವನ್ನು ಎಸೆದ ರೀತಿಯನ್ನು ನಗುನಗುತ್ತಲೇ ವಿವರಿಸಿದನು.
ಕದ್ರಿ ಪೊಲೀಸರು ಜೋನಸ್ ಜೂಲಿನ್ ಸ್ಯಾಮ್ಸನ್ ಶನಿವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿ ಗೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಎರಡನೇ ಆರೋಪಿ ವಿಕ್ಟೋರಿಯಾ ಮಥಾಯಿಸ್ ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 29ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಗರವನ್ನು ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿಯ ಬರ್ಬರ ಹತ್ಯೆ ಪ್ರಕರಣದ ತನಿಖೆಯ ಸಂಪೂರ್ಣ ಹೊಣೆಯನ್ನು ಕದ್ರಿ ಠಾಣಾ ಪೊಲೀಸರಿಗೆ ವಹಿಸಲಾಗಿದೆ. ಕದ್ರಿ ಪೊಲೀಸರೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.