ಉಡುಪಿ, ಮೇ 18 (Daijiworld News/SM): ಉಡುಪಿ ಜಿಲ್ಲೆಯಲ್ಲಿ ಕೃಷಿ ಬೆಳೆ ನಷ್ಟಗೊಂಡು ವಿಮಾ ಪರಿಹಾರಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಪರಿಹಾರ ಪಾವತಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಗ್ರ ಕೃಷಿ ಅಭಿಯಾನ 2019-20 ಹಾಗೂ ಫಸಲ್ ಬಿಮಾ ಯೋಜನೆ – ಮುಂಗಾರು ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ರೈತರು ಬೆಳೆ ನಷ್ಟದಿಂದ ವಿಮಾ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಮಾ ಕಂಪೆನಿಯು ಆಕ್ಷೇಪಣೆ ಹಾಕಿರುವುದು ಸರಿಯಲ್ಲ. ಕೃಷಿ ಭೂಮಿಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸದೆ ವಿಮಾ ಕಂಪೆನಿಗಳು ಕ್ಲೇಮುಗಳಿಗೆ ಆಕ್ಷೇಪಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಿಮಾ ಕಂಪೆನಿ ಪ್ರತಿನಿಧಿಗಳು ಕೂಡಲೇ ಕೃಷಿ ಭೂಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕ್ಲೇಮುಗಳನ್ನು ವಿಲೇವಾರಿಗೊಳಿಸಲು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಅವರು ಸಭೆಗೆ ಮಾಹಿತಿ ನೀಡಿ, 2018-19ರಲ್ಲಿ ಜಿಲ್ಲೆಯಲ್ಲಿ 1600 ರೈತರು ಮುಂಗಾರು ಭತ್ತ ಅವಧಿಯಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ನೋಂದಾಯಿಸಿದ್ದು, 3302 ಎಕರೆ ಭೂಮಿಗೆ ಇದು ವ್ಯಾಪಿಸಿದೆ. 2018-19ರಲ್ಲಿ 1776 ಅಡಕೆ ಬೆಳೆಗಾರರು ಹಾಗೂ 68 ಕಾಳುಮೆಣಸು ಬೆಳೆಗಾರರು ವಿಮಾ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ ಎಂದು ಹೇಳಿದರು.