ಮಂಗಳೂರು, ಮೇ19(Daijiworld News/SS): ಪೊಲೀಸ್ ಪಡೆಯಲ್ಲಿಯೂ ಕೋಮುವಾದಿಗಳು ಸೇರಿಕೊಂಡಿರುವುದು ಗಲಭೆ ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸರಕಾರ ಒತ್ತಡವಿಲ್ಲದೆ ಇದ್ದಲ್ಲಿ ಯಾವುದೇ ಕೋಮು ಗಲಭೆಯೂ 24 ಗಂಟೆಗಿಂತ ಹೆಚ್ಚು ಕಾಲ ಮುಂದುವರಿಯದು. ಪೊಲೀಸರ ಮೇಲೆ ಸಜ್ಜನರು, ಜಾತ್ಯತೀತವಾದಿಗಳು ಒತ್ತಡ ಹಾಕುವ ಮೂಲಕ ಶಾಂತಿ ಕಾಪಾಡಲು ಪ್ರೇರೇಪಿಸಬೇಕು ಎಂದು ಹೇಳಿದರು.
ಎಲ್ಲೆಡೆ ಜಾತ್ಯತೀತೆಯನ್ನು ರಕ್ಷಿಸಲು ಸ್ಥಳೀಯ ಹೋರಾಟ ಅತ್ಯಗತ್ಯ. ಪೊಲೀಸ್ ಪಡೆಯಲ್ಲಿಯೂ ಕೋಮುವಾದಿಗಳು ಸೇರಿಕೊಂಡಿರುವುದು ಗಲಭೆ ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ಹೇಳಿದರು.
ಋಣಾತ್ಮಕ, ಏಕಮುಖ ಚರ್ಚೆಗಳು ಇಂದು ನಡೆಯುತ್ತಿವೆ. ಜಾತ್ಯತೀತತೆಯ ರಕ್ಷಣೆಗೆ ಸಂಬಂಧಿಸಿದ ಚರ್ಚೆಗಳು 50 ವರ್ಷಗಳ ಹಿಂದಕ್ಕೆ ಸಾಗಿದೆ. ನಮ್ಮ ಪರಂಪರೆ, ಇತಿಹಾಸದ ಸಮರ್ಪಕ ಗ್ರಹಿಕೆ ಇಲ್ಲದೆ ನಡೆಯುತ್ತಿರುವ ಚರ್ಚೆಗೆ ವಿರುದ್ಧವಾಗಿ ಇತಿಹಾಸ ಪ್ರಜ್ಞೆಯನ್ನು ಯುವ ಜನರಲ್ಲಿ ಮೂಡಿಸುವ ವೇದಿಕೆ ಕಲ್ಪಿಸಬೇಕು ಎಂದು ಕರೆ ನೀಡಿದರು.
ಬಹುಸಂಖ್ಯಾತರ ಕೋಮುವಾದವನ್ನು ವಿರೋಧಿಸುವ ಜತೆಯಲ್ಲೇ ಅಲ್ಪಸಂಖ್ಯಾತರ ಕೋಮುವಾದವನ್ನು ವಿರೋಧಿಬೇಕು. ಜಾತ್ಯತೀಯತೆಗಾಗಿ ಹೋರಾಟ ಹಾಗೂ ಮತೀಯವಾದವನ್ನು ಹತ್ತಿಕ್ಕುವ ಸಂದರ್ಭ ನಾವು ದ್ವೇಷವನ್ನು ಶಾಂತಿಯ ಮೂಲಕ ಪರಿವರ್ತಿಸುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.
ದ್ವೇಷಪೂರಿತ ಭಾಷಣಗಳ ಮೂಲಕ ದುರ್ಬಲ ವರ್ಗವನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಆ ದ್ವೇಷಭರಿತ ಮಾತುಗಳನ್ನು ಶಾಂತಿಯ ಸಂದೇಶದ ಮೂಲಕ ಹತ್ತಿಕ್ಕುವ ಪ್ರಯತ್ನ ಆಗಬೇಕಾಗಿದೆ ಎಂದು ಹೇಳಿದರು.