ಉಡುಪಿ, ನ 25: ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದು ಉಡುಪಿಯಲ್ಲಿ ನಡೆದ ಐತಿಹಾಸಿಕ ಧರ್ಮ ಸಂಸತ್ನ ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮೊಳಗಿದೆ.
ಅನುಕೂಲಕರ ರಾಜಕೀಯ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಂಡು ಅಯೋಧ್ಯೆಯಲ್ಲಿ ನಿರ್ದಿಷ್ಟ ಕಾಲಮಿತಿಯೊಳಗೆ ರಾಮ ಮಂದಿರ ನಿರ್ಮಿಸಲು ಸಾಧು ಸಂತರು ಸಜ್ಜಾಗಿದ್ದಾರೆ.
ರಾಯಲ್ ಗಾರ್ಡನ್ನ ಟಿ.ಎಸ್.ಭರಣಯ್ಯ ವೇದಿಕೆಯಲ್ಲಿ ನಡೆದ ಧರ್ಮ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹೆಚ್ಚಿನ ಸಾಧು ಸಂತರು ರಾಮ ಮಂದಿರ ನಿರ್ಮಾಣದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮಾತ್ರವಲ್ಲ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರವನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲೇ ಒಂದು ವರ್ಷದೊಳಗೆ ರಾಮ ಮಂದಿರ ನಿರ್ಮಿಸುತ್ತೇವೆ. ಮಂದಿರ ನಿರ್ಮಾಣಕ್ಕೆ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ಇದೆ ಎಂದು ಹೇಳಿದ್ದಾರೆ.
ಆರ್ ಎಸ್ ಎಸ್ ಸರ ಸಂಘಚಾಲಕ ಮೋಹನ ಭಾಗವತ್ ಮಾತನಾಡಿ, ಹಿಂದೂ ಧರ್ಮೀಯರ ಹಲವು ದಶಕಗಳ ಕನಸು ನನಸಾಗುವ ಕಾಲ ಸಮೀಪಿಸುತ್ತಿದೆ. ಮಂದಿರ ನಿರ್ಮಾಣದ ಯೋಜನೆ ಕಾರ್ಯಗತವಾಗುವ ದಿನಗಳು ಹತ್ತಿರವಾಗಿದೆ. ತಾಳ್ಮೆ ಮತ್ತು ಸಂಯಮದಿಂದ ನಾವು ಹೆಜ್ಜೆ ಹಾಕಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ, ದಶಕಗಳ ಕಾಲದಿಂದ ಹೋರಾಡುತ್ತಿದ್ದರೂ ರಾಮ ಮಂದಿರ ನಿರ್ಮಾಣದ ಕನಸು ಕೈಗೂಡಿಲ್ಲ. ಪೇಜಾವರ ಸ್ವಾಮೀಜಿಯವರ ಕಣ್ಣೆದುರಿನಲ್ಲಿಯೇ ರಾಮ ಮಂದಿರ ಅಸ್ತಿತ್ವಕ್ಕೆ ಬರಬೇಕು ಎಂದು ಹೇಳಿದ್ದಾರೆ.