ಕುಂದಾಪುರ, ಮೇ 20 (Daijiworld News/MSP): ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಹೇರಿಕುದ್ರು ಶ್ರೀ ಅರೆಕಲ್ಲು ಬೊಬ್ಬರ್ಯ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳನನ್ನು ಸಾರ್ವಜನಿಕರ ಸಹಕಾರದಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಅಂಬರಹಿತ್ಲು, ಮುಂಡಳ್ಳಿ ನಿವಾಸಿ ಸತೀಶ ಮಹದೇವ ನಾಯ್ಕ ಬಂಧಿತ ಆರೋಪಿ.
ಆರೋಪಿ ಮುಂಜಾನೆ ವೇಳೆ ದೇವಸ್ಥಾನದ ಕಾಣಿಕೆ ಡಬ್ಬಿಗೆ ಸರಳು ಹಾಕಿ ಒಪನ್ ಮಾಡುವ ಪ್ರಯತ್ನ ಮಾಡುತ್ತಿರುವಾಗ ದೇವಸ್ಥಾನದ ಮುಖ್ಯಸ್ಥರು ಟಾರ್ಚ್ ಲೈಟ್ ಹಾಕಿದ್ದಾರೆ. ಅಷ್ಟರಲ್ಲಿ ಕಣ್ಮರೆಯಾದ ಆರೋಪಿಗಾಗಿ ಸ್ಥಳೀಯರು ಒಟ್ಟಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ ದೇವಸ್ಥಾನ ಹಿಂಬದಿಯಲ್ಲಿದ್ದ ಪೊದೆಯಲ್ಲಿ ಪತ್ತೆಯಾಗಿದ್ದಾನೆ. ಈತ ಕಳ್ಳತನಕ್ಕೆ ಯತ್ನಿಸಿದ ದೃಶ್ಯ ಸಿಸಿ ಕೆಮರಾದಲ್ಲೂ ದಾಖಲಾಗಿದೆ. ನಟೋರಿಯಸ್ ಕಳ್ಳನಾಗಿ ಈತ ಹೊನ್ನಾವರ, ಭಟ್ಕಳ, ಕಲಘಟಗಿ, ಮಂಕಿ, ಅಂಕೋಲಾ, ಕಡೆಗಳಲ್ಲೂ ಕೂಡ ಕನ್ನ ಹಾಕಿದ್ದ. ಸದ್ಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.