ಚಿತ್ರದುರ್ಗ, ನ 25: ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಪೋಷಕರು ಮಗಳ ಮೇಲೆ ಕೊಲೆ ಯತ್ನ ನಡೆಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,3 ತಿಂಗಳ ಗರ್ಭಿಣಿ ಮಗಳ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿ ಪೋಷಕರು ದುಷ್ಕೃತ್ಯ ನಡೆಸಿದ್ದಾರೆ.
ದುಷ್ಕೃತ್ಯಕ್ಕೆ ಒಳಗಾಗಿರುವ ಯುವತಿ ಆಶಾ ಎಂದು ತಿಳಿದುಬಂದಿದೆ. 6 ತಿಂಗಳ ಹಿಂದೆ ಯುವತಿ ಆಶಾ ದಲಿತ ಯುವಕ ಮಧು ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ಮದುವೆಗೆ ಪೋಷರ ವಿರೋಧವಿತ್ತು. ಹೀಗಾಗಿ ಈ ಪ್ರೇಮಿಗಳು ಊರನ್ನು ಬಿಟ್ಟು ಬೇರೆ ಕಡೆ ವಾಸವಿದ್ದರು. ಆದರೆ ಕಳೆದ 2-3 ದಿನಗಳ ಹಿಂದೆ ಸ್ವ ಗ್ರಾಮಕ್ಕೆ ಮರಳಿ ಬಂದು ಮಧು ಅವರ ತಂದೆ ತಾಯಿಯ ಮನೆಯಲ್ಲಿದ್ದರು.
ಶುಕ್ರವಾರ ರಾತ್ರಿಯ ವೇಳೆ ಮಧು ಮನೆಗೆ ನುಗ್ಗಿದ ಆಶಾ ಅವರ 12ಕ್ಕೂ ಹೆಚ್ಚು ಸಂಬಂಧಿಕರು 3 ತಿಂಗಳ ಗರ್ಭಿಣಿ ಆಶಾ ಹೊಟ್ಟೆಯ ಮೇಲೆ ಕಲ್ಲು ಎತ್ತಿ ಹಾಕಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.
ಗಂಭೀರ ಗಾಯಗೊಂಡಿರುವ ಆಶಾ ಅವರನ್ನು ಭರಮಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.